Sidlaghatta : ಮಕ್ಕಳು ವಿದ್ಯಾರ್ಥಿ ಜೀವನದಲ್ಲಿದ್ದಾಗ ಕೈಗೊಳ್ಳಬಹುದಾದ ಶೈಕ್ಷಣಿಕ ಪ್ರವಾಸಗಳಿಂದ ಶಾಶ್ವತ ಕಲಿಕೆ ಉಂಟಾಗುತ್ತದೆ. ಸ್ವಂತ ಅನುಭವದ ಮೂಲಕ ಅನೇಕ ವಿಚಾರಗಳ ಕಲಿಕೆಯಾಗುವುದರಿಂದ ಪ್ರವಾಸಗಳು ಮಕ್ಕಳ ಜೀವನದಲ್ಲಿ ಮಹತ್ತರವಾದ ಪಾತ್ರ ವಹಿಸುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರ ಕುಮಾರ್ ತಿಳಿಸಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಬುಧವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಗಳ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ, ಮೊರಾರ್ಜಿ ದೇಸಾಯಿ ಹಾಗೂ ಕ್ರೈಸ್ತ ವಸತಿ ಶಾಲೆಗಳಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ನಾಲ್ಕು ದಿನಗಳ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಪಠ್ಯ ವಿಷಯದ ಕಲಿಕೆಗೆ ಪೂರಕವಾಗಿ ಪಠ್ಯೇತರ ಚಟುವಟಿಕೆಯಾಗಿ ಶೈಕ್ಷಣಿಕ ಪ್ರವಾಸವು ಇತಿಹಾಸ, ವಿಜ್ಞಾನ, ಪರಿಸರ, ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಸಂಗತಿಗಳನ್ನು ವಾಸ್ತವಿಕ ಅನುಭವದ ಮೇಲೆ ಕಲಿಯಲು ವಿದ್ಯಾರ್ಥಿಗಳಿಗೆ ಸಹಾಯಕವಾದದ್ದು. ಸರ್ಕಾರವು ಕರ್ನಾಟಕ ದರ್ಶನದ ಮೂಲಕ ಬಡ ವಿದ್ಯಾರ್ಥಿಗಳ ಪ್ರವಾಸ ಕೈಗೊಳ್ಳಲು ಯೋಜನೆಯನ್ನು ರೂಪಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ ಎಂದರು.
ಶಿಕ್ಷಣ ಸಂಯೋಜಕ ಇ. ಭಾಸ್ಕರ್ ಗೌಡ ಮಾತನಾಡಿ, ನಾಲ್ಕು ದಿನಗಳಲ್ಲಿ ತಾಲ್ಲೂಕಿನ ಸುಮಾರು 119 ವಿದ್ಯಾರ್ಥಿಗಳು ಶ್ರೀರಂಗಪಟ್ಟಣ, ಮೈಸೂರು, ಮಡಿಕೇರಿ, ಭಾಗಮಂಡಲ, ಶ್ರವಣಬೆಳಗೊಳ, ಹಳೇಬೀಡು, ಬೇಲೂರು, ಯಡಿಯೂರು ಮತ್ತಿತರ ಸ್ಥಳಗಳಿಗೆ ಭೇಟಿ ನೀಡಲಿದ್ದು, ಸೂಕ್ತ ಮಾರ್ಗದರ್ಶನದೊಂದಿಗೆ, ಭೇಟಿ ನೀಡುವ ಸ್ಥಳಗಳಲ್ಲಿ ಅಗತ್ಯ ಶೈಕ್ಷಣಿಕ ಮಾಹಿತಿಯನ್ನು ಮಕ್ಕಳಿಗೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ ವೆಂಕಟರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ರುದ್ರೇಶ ಮೂರ್ತಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರಸ್ವತಮ್ಮ, ಸುದರ್ಶನ್ , ಸಿಆರ್‌ಪಿ ಪ್ರಭಾಕರ್, ಶಿಕ್ಷಕ ಸತೀಶ್, ಮುರಳಿ , ಶಿಕ್ಷಕಿ ಅನ್ನಪೂರ್ಣ ಹಿರೇಮಠ್, ಕೃಪಾ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಇಶ್ರತ್, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನೋಡಲ್ ಅಧಿಕಾರಿ ವೆಂಕಟೇಶ್ ಹಾಜರಿದ್ದರು.