Home Sidlaghatta ವಿಜ್ಞಾನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ವಿಜ್ಞಾನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

0

Sidlaghatta : ವಿಜ್ಞಾನವು ಪ್ರತಿಯೊಬ್ಬರ ಜೀವನದಲ್ಲಿ ಅವಿಭಾಜ್ಯ ಅಂಗವಾಗಿದೆ. ಮಕ್ಕಳದಿಸೆಯಿಂದಲೇ ನಿರಂತರವಾಗಿ ವಿಜ್ಞಾನದ ಮಹತ್ವವನ್ನು ಅರಿಯುವ ಪ್ರಯತ್ನವಾಗಬೇಕು. ವಿಜ್ಞಾನವನ್ನು ಮಾನವಕುಲದ ಹಿತ, ಒಳಿತಿನ ದೃಷ್ಟಿಯಿಂದ ಬಳಕೆಯಾಗುವಂತಾಗಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ತಿಳಿಸಿದರು.

ಶಿಡ್ಲಘಟ್ಟ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಟಿ, ವಿಜ್ಞಾನ ನಾಟಕ, ಜನಸಂಖ್ಯಾಶಿಕ್ಷಣ ಯೋಜನೆಯಡಿ ಪಾತ್ರಾಭಿನಯ, ಜಾನಪದನೃತ್ಯ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾಹಂತದಿಂದಲೇ ವಿಜ್ಞಾನವನ್ನು ಆಸಕ್ತಿಕರ ಪ್ರಯೋಗ, ಚಟುವಟಿಕೆಗಳ ಮೂಲಕ ಬೋಧಿಸುವಂತೆ ಕ್ರಮಕೈಗೊಳ್ಳಲಾಗುತ್ತಿದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ರೂಢಿಸಲು ವಿಚಾರಗೋಷ್ಟಿ, ವಿಜ್ಞಾನನಾಟಕಗಳು ಸಹಕಾರಿಯಾಗಿವೆ ಎಂದರು.

ಶಿಕ್ಷಣಸಂಯೋಜಕ ಇ.ಭಾಸ್ಕರಗೌಡ ಮಾತನಾಡಿ, ಭಾರತವು ಪ್ರಾಚೀನಕಾಲದಿಂದಲೂ ಗಣಿತ, ವಿಜ್ಞಾನದಲ್ಲಿ ಸಾಕಷ್ಟು ಮುಂದಿದೆ. ಮಕ್ಕಳದಿಸೆಯಿಂದಲೇ ವಿಜ್ಞಾನದ ಕಡೆಗೆ ಒಲವು ಹೆಚ್ಚಿ ಹೆಚ್ಚೆಚ್ಚು ಸಂಶೋಧನೆಗಳಾಗಿ ದೇಶದ ಪ್ರಗತಿಗೆ ಪೂರಕವಾಗಬೇಕು. ಮಕ್ಕಳು ವಿಜ್ಞಾನದ ಬಗೆಗೆ ಹೆಚ್ಚೆಚ್ಚು ಒಲವು ಮೂಡಿಸಿಕೊಂಡು ಸಂಶೋಧನಾತ್ಮಕ ಕಲಿಕೆಯ ಕಡೆಗೆ ಆಸಕ್ತಿತೋರಬೇಕು ಎಂದರು.

ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಧೋರಣೆ ವೃದ್ಧಿಗೊಳ್ಳಬೇಕು. ವಿಜ್ಞಾನದ ಲೇಖನಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸಣ್ಣಸಣ್ಣಪ್ರಯೋಗ, ನಿರಂತರ ವೈಜ್ಞಾನಿಕ ಚಿಂತನೆ, ಪ್ರಶ್ನಿಸುವ ಕೌಶಲ, ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸಿರಿಧಾನ್ಯಗಳ ಉಪಯುಕ್ತತೆ, ಆಹಾರಸುರಕ್ಷತೆ, ಆಧುನಿಕ ತಂತ್ರಜ್ಞಾನದ ಬಳಕೆ ಕುರಿತು ವಿಜ್ಞಾನವಿಚಾರಗೋಷ್ಟಿ, ವಿಜ್ಞಾನ ನಾಟಕಸ್ಪರ್ಧೆ, ಜನಸಂಖ್ಯಾಶಿಕ್ಷಣ ಯೋಜನೆಯಡಿ ಜಾನಪದನೃತ್ಯ, ಪಾತ್ರಾಭಿನಯ ಸ್ಪರ್ಧೆಗಳನ್ನು ನಡೆಸಿ ವಿಜೇತ ತಂಡಗಳಿಗೆ ಬಹುಮಾನ, ಪ್ರಶಸ್ತಿಪತ್ರಗಳನ್ನು ವಿತರಿಸಲಾಯಿತು.

ತಾಲ್ಲೂಕು ದೈಹಿಕಶಿಕ್ಷಣಾಧಿಕಾರಿ ದೇವೇಂದ್ರಪ್ಪ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಮಂಜುಳಾ, ಶಿಕ್ಷಣಸಂಯೋಜಕಿ ಪರಿಮಳಾ, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಖಜಾಂಚಿ ಗೋಪಾಲಕೃಷ್ಣ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಹಕಾರ್ಯದರ್ಶಿ ಎಂ.ಶಿವಕುಮಾರ್, ಖಜಾಂಚಿ ಹೇಮಾವತಿ, ಸಿಆರ್‌ಪಿ ವಿ.ಪ್ರಭಾಕರ್, ಎಲ್.ಸತೀಶ್, ವಿವಿಧ ಶಾಲೆಗಳ ಶಿಕ್ಷಕರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version