Gudibande : ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡ ಬಳಿಯ ಷಾಶಿಬ್ ಏರೋನಾಟಿಕಲ್ ಎಂಜಿನಿಯರಿಂಗ್ ಕಾಲೇಜಿನ (Sha-Shib College of Engineering) ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳು (Students) ಬುಧವಾರ ಪರೀಕ್ಷೆಯಿಂದ ಹೊರಗುಳಿದು ಕಾಲೇಜಿನ ಎದುರು ಪ್ರತಿಭಟನೆ (Protest) ನಡೆಸಿದರು.
ಪಾಠ ಮಾಡದೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂಬುವುದು ವಿದ್ಯಾರ್ಥಿಗಳ ಆರೋಪ. ಇಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗೆ ಕೆಲ ಸೆಮಿಸ್ಟರ್ ಪಾಠ ವಿದ್ಯಾನಗರದಲ್ಲಿ ನಡೆದರೆ ಕೆಲ ಸೆಮಿಸ್ಟರ್ ಇಲ್ಲಿ ನಡೆಯುತ್ತದೆ. ಇನ್ನೂ ಕೆಲವೊಮ್ಮೆ ಪರೀಕ್ಷೆಗಾಗಿ ವಿದ್ಯಾರ್ಥಿಗಳನ್ನು ಚಿಕ್ಕಬಳ್ಳಾಪುರ ಕ್ಯಾಂಪಸ್‌ಗೆ ಕರೆದುಕೊಂಡು ಬರುತ್ತಾರೆ. ಪಾಠಗಳನ್ನೇ ಮಾಡದೆ ಏಕಾಏಕಿ ಪರೀಕ್ಷೆ ಬರೆಯಿರಿ ಎಂದರೆ ಹೇಗೆ ಬರೆಯುವುದು ಹೇಳಿ? ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.
ಈ ಸಂಭಂದ ಮಾತನಾಡಿದ ಪ್ರಾಂಶುಪಾಲ ಸಿದ್ಧನಗೌಡ “ವಿದ್ಯಾರ್ಥಿಗಳ ಆರೋಪದಲ್ಲಿ ಹುರುಳಿಲ್ಲ. ನಮ್ಮಲ್ಲಿ ಎರಡು ಕ್ಯಾಂಪಸ್ ಇದ್ದು, ಎರಡೂ ಕಡೆ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಎರಡನೇ ಸೆಮಿಸ್ಟರ್‌ನಲ್ಲಿ ಕೆಲ ವಿಷಯದಲ್ಲಿ ಉಪನ್ಯಾಸಕರ ಕಡೆಯಿಂದ ತೊಂದರೆ ಆಗಿದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರೂ ಪರೀಕ್ಷೆ ಬರೆಯದೆ ಪ್ರತಿಭಟನೆಗೆ ಇಳಿದಿದ್ದಾರೆ. ಕೊರೊನಾ ನಂತರದಲ್ಲಿ ದಾಖಲಾತಿ ಸಂಪೂರ್ಣ ಕುಸಿದಿದ್ದು ಕಾಲೇಜು ನಡೆಸಿಕೊಂಡು ಹೋಗುವುದೇ ದೊಡ್ಡ ಸಾಹಸವಾಗಿದೆ” ಎಂದು ತಿಳಿಸಿದರು.