Shettyhalli, Sidlaghatta : ಬರಗಾಲ, ಮೇವಿನ ಕೊರತೆ, ಹಾಲಿನ ಬೆಲೆ ಇಳಿಕೆ ಮುಂತಾದ ಕಾರಣಗಳಿಂದ ಹೈನುಗಾರಿಕೆಯನ್ನು ತೊಡಗಿಸಿಕೊಂಡವರ ಸಂಖ್ಯೆ ಇಳಿಮುಖವಾಗುತ್ತಿಲ್ಲ. ಬದಲಿಗೆ ಸಾಮಾಜಿಕ ಕಾರಣಗಳಿಂದ ಹೈನುಗಾರಿಕೆಯಿಂದ ಅನೇಕ ಕುಟುಂಬಗಳು ವಿಮುಖವಾಗುತ್ತಿವೆ ಎಂದು ಕೆಎಂಎಫ್ ನಿರ್ದೇಶಕ ಆರ್.ಶ್ರೀನಿವಾಸ್ ರಾಮಯ್ಯ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿಯ ಶೆಟ್ಟಹಳ್ಳಿಯಲ್ಲಿ ಸೋಮವಾರ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಹೈನುಗಾರಿಕೆಯಲ್ಲಿ ಮಹಿಳೆಯರದ್ದೇ ಮುಖ್ಯ ಪಾತ್ರ, ಸೀಮೆ ಹಸುಗಳ ನಿರ್ವಹಣೆ, ಮೇವು ಹಾಕಿ ನೀರು ಹಾಕಿ ಹಾಲು ಕರೆಯುವ ಬಹುತೇಕ ಎಲ್ಲ ಕೆಲಸಗಳನ್ನೂ ಮಹಿಳೆಯರೆ ಮಾಡುವುದು ಹೆಚ್ಚು. ಆದರೆ ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆಯ ಕೆಲಸ ಕಾರ್ಯಗಳನ್ನು ಮಾಡಲು ಅವರು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಜತೆಗೆ ನೆರೆಯ ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದಲೂ ಕೆಲ ದಲ್ಲಾಳಿಗಳು ಈ ಭಾಗಕ್ಕೆ ಬಂದು ಉತ್ತಮ ತಳಿಯ ಹಾಲು ನೀಡುವ ಹಸುಗಳನ್ನು ಹೆಚ್ಚು ಬೆಲೆಗೆ ಕೊಂಡೊಯ್ಯುತ್ತಿದ್ದಾರೆ. ಕೆಲ ರೈತರೂ ಸಹ ಹೆಚ್ಚಿನ ಹಣದ ಆಸೆಗೆ ಸೀಮೆ ಹಸುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಹಾಲು ಉತ್ಪಾದನೆ ಕುಸಿದಿದೆಯೆ ಹೊರತು ಬೇರೇನೂ ಇಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಗೆ ಹೋಲಿಸಿಕೊಂಡರೆ ಕೋಲಾರ, ಹಾಸನದಲ್ಲಿ ದಿನ ದಿನಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆ ಆಗುತ್ತಿದೆ. ಅಲ್ಲಿ ಬರಗಾಲ ಇಲ್ಲವಾ ಎಂದು ಪ್ರಶ್ನಿಸಿದರು.
ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆಯು ಉಪ ಕಸುಬಾಗಿ ಉಳಿದಿಲ್ಲ. ಮುಖ್ಯ ಕಸುಬನ್ನಾಗಿ ಕೈಗೊಂಡು ಸಾಕಷ್ಟು ಕುಟುಂಬಗಳು ಆರ್ಥಿಕವಾಗಿ ಬಹಳ ಬೆಳೆಯುತ್ತಿರುವುದಾಗಿ ಹರ್ಷದಾಯಕ ಎಂದು ಹೇಳಿದರು.
ಮಾಜಿ ಸಚಿವ ವಿ.ಮುನಿಯಪ್ಪ ಮಾತನಾಡಿ, ಈ ಹಿಂದೆ ಸಚಿವನಾಗಿದ್ದಾಗ ನಾನೇ ಖುದ್ದು ಸೀಮೆ ಹಸುಗಳಲ್ಲಿ ಹಾಲು ಕರೆಯುತ್ತಿದ್ದೆ. ಅದು ನಮ್ಮ ರೈತ ಕಸುಬು, ಅದರ ಬಗ್ಗೆ ನಾಚಿಕೆ ಮುಜುಗರ ಪಡುವಂತದ್ದೇನಿಲ್ಲ ಎಂದರು.
ಆದರೆ ಇತ್ತೀಚೆಗೆ ಶ್ರಮದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಆದ್ದರಿಂದ ಹೈನುಗಾರಿಕೆ ಉತ್ಪಾದನೆ ಕುಸಿದಿರಬಹುದು. ಹೈನುಗಾರಿಕೆಯನ್ನು ಬಿಡಬೇಡಿ, ಅದರಿಂದ ನಿಮ್ಮ ಬದುಕನ್ನು ಉತ್ತಮವಾಗಿ ಸ್ವಾಭಿಮಾನದಿಂದ ಕಟ್ಟಿಕೊಳ್ಳಬಹುದು ಎಂದು ಹೇಳಿದರು. ಸುಮಾರು 32 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಿರುವ ನೂತನ ಡೇರಿ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಯಿತು.
ಶೆಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಹನುಮೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆ.ಗುಡಿಯಪ್ಪ, ಎಸ್.ಎಫ್.ಸಿ.ಎಸ್ ಮಾಜಿ ಅಧ್ಯಕ್ಷ ರಾಮಚಂದ್ರಪ್ಪ, ಕೋಚಿಮುಲ್ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ.ಬಿ.ಆರ್.ರವಿಕಿರಣ್, ವಿಸ್ತರಣಾಕಾರಿ ಮಂಜುನಾಥ್, ಡೇರಿ ಕಾರ್ಯದರ್ಶಿ ಎಸ್.ಡಿ.ನಾರಾಯಣಸ್ವಾಮಿ, ಉಪಾಧ್ಯಕ್ಷ ಅಕ್ಕಿನಾರಾಯಣಸ್ವಾಮಿ, ಎಸ್.ಎಂ.ಅಶ್ವತ್ಥಪ್ಪ, ಎಸ್.ವಿ.ನಾರಾಯಣಸ್ವಾಮಿ, ಎಸ್.ವಿ.ಚಂದ್ರಶೇಖರ್, ಕೃಷ್ಣಪ್ಪ, ದ್ಯಾವಪ್ಪ ಹಾಜರಿದ್ದರು.