Sidlaghatta : ಈಚೆಗೆ ಹೈದರಾಬಾದ್‍ನಲ್ಲಿ ನಡೆದ ರಾಷ್ಟ್ರೀಯ ಕೃಷಿ ಚಿತ್ರೋತ್ಸವದಲ್ಲಿ (Agri Film Festival) ತಾಲ್ಲೂಕಿನ ಭಕ್ತರಹಳ್ಳಿಯ ಸೃಷ್ಟಿ ಮೀಡಿಯ ಸಂಸ್ಥೆಯ ಡಾ. ಬಿ.ಎನ್. ಅಂಬರೀಷ್ ನಿರ್ದೇಶನದಲ್ಲಿ ಮೂಡಿಬಂದ “ಪ್ರಾಸ್ಪೆಕ್ಟ್ಸ್ ಆಫ್ ಗರ್ಕಿನ್ ಇಂಡಸ್ಟ್ರಿ ಇನ್ ಇಂಡಿಯಾ” (Prospects of Gherkin industry in India) ಎಂಬ ಕೃಷಿ ಚಿತ್ರಕ್ಕೆ ಅತ್ಯುತ್ತಮ ಇಂಗ್ಲಿಷ್ ಭಾಷಾ ಚಿತ್ರ ಪ್ರಶಸ್ತಿ (Award) ಲಭಿಸಿದೆ.
ಹೈದರಾಬಾದ್‍ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಎಕ್ಸ್‍ಟೆನ್ಷನ್ ಮೇನೇಜ್‍ಮೆಂಟ್(ಮೇನೇಜ್) ಸಂಸ್ಥೆಯು ಪ್ರಪ್ರಥಮ ಬಾರಿಗೆ ರಾಷ್ಟ್ರಮಟ್ಟದಲ್ಲಿ ಆಯೋಜಿಸಿದ್ದ ಕೃಷಿ ಚಿತ್ರೋತ್ಸವದಲ್ಲಿ 20 ರಾಜ್ಯಗಳಿಂದ, 9 ಭಾಷೆಗಳಲ್ಲಿ 270 ಚಿತ್ರಗಳು ಚಿತ್ರೋತ್ಸವಕ್ಕೆ ನಾಮನಿರ್ದೇಶಗೊಂಡಿದ್ದವು. ಇವುಗಳಲ್ಲಿ 16 ಆಯ್ದ ಅತ್ಯುತ್ತಮ ಚಿತ್ರಗಳು ಪ್ರಶಸ್ತಿಗೆ ಆಯ್ಕೆಗೊಂಡಿದ್ದವು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಸರ್ಕಾರದ ಕೃಷಿ ಸಚಿವ ಬಿ. ಸಿ. ಪಾಟೀಲ್ ಪ್ರಶಸ್ತಿ ವಿತರಿಸಿದರು. ಕರ್ನಾಟಕ ರಾಜ್ಯ ಕೃಷಿ ಇಲಾಖೆ ನಿರ್ದೇಶಕಿ ಡಾ. ನಂದಿನಿಕುಮಾರಿ, ಕರ್ನಾಟಕ ಜಲಾನಯನ ಇಲಾಖೆ ಆಯುಕ್ತ ಡಾ. ಎಂ. ವಿ. ವೆಂಕಟೇಶ್, ಮೇನೇಜ್ ಸಂಸ್ಥೆಯ ಡೈರೆಕ್ಟರ್ ಜನರಲ್ ಡಾ. ಪಿ. ಚಂದ್ರಶೇಖರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಡಾ. ಬಿ.ಎನ್.ಅಂಬರೀಷ್, ಮೂಲತಃ ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ರೈತ ಬಿ.ಎನ್. ನಂಜುಂಡಮೂರ್ತಿ ಮತ್ತು ಗೌರಮ್ಮ ಅವರ ಮಗ. ದ್ವಿತೀಯ ಪಿ.ಯು.ಸಿವರೆಗೂ ಸ್ಥಳೀಯ ಶಾಲೆಗಳಲ್ಲಿಯೇ ವ್ಯಾಸಂಗ ಮಾಡಿ 1999 ರಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ BSc ( ಕೃಷಿ ಮಾರುಕಟ್ಟೆ) ಪದವಿ ಪಡೆದಿದ್ದಾರೆ. ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿ (Ramoji Film City) ಯಲ್ಲಿ ಈ ಟಿವಿ (ETV) ಕನ್ನಡ ಚಾನೆಲ್‍ನ ಅನ್ನದಾತ ಕಾರ್ಯಕ್ರಮ ಸಂಯೋಜಕರಾಗಿ 5 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ದೂರದರ್ಶನ ಚಾನೆಲ್ ನ ಕೃಷಿ ದರ್ಶನ ಹಾಗೂ ಸುವರ್ಣ ನ್ಯೂಸ್ (Suvarna News) ಚಾನೆಲ್‍ನಲ್ಲೂ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದಲ್ಲಿ ಎಂ.ಎ. ಪತ್ರಿಕೋದ್ಯಮ ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್.ಡಿ ವ್ಯಾಸಂಗ ಮಾಡಿ ಪತ್ರಿಕೋದ್ಯಮ ವಿಷಯದಲ್ಲಿ PhD ಪದವಿ ಗಳಿಸಿದ್ದಾರೆ.
2004 ಡಿಸೆಂಬರ್‍ನಲ್ಲಿ ತಾವೇ ಹುಟ್ಟು ಹಾಕಿದ ಸೃಷ್ಟಿ ಮೀಡಿಯ ಸಂಸ್ಥೆಯಿಂದ ಇದುವರೆಗೂ 500 ಕ್ಕೂ ಹೆಚ್ಚು ಕೃಷಿ ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿ ಇಡೀ ದೇಶದಾದ್ಯಂತ ಹೆಸರು ಪಡೆದಿದ್ದಾರೆ. ಸುಮಾರು 21 ವರ್ಷಗಳ ಕಾಲ ಕೃಷಿ ಸಮುದಾಯಕ್ಕೆ ಅಗತ್ಯವಾದ ಮಾಹಿತಿಯನ್ನು ಒಳಗೊಂಡ ಕೃಷಿ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿ ಪರಿಣತಿ ಹೊಂದಿದ್ದಾರೆ. 2017 ರಲ್ಲಿ ಭಾರತ ಸರ್ಕಾರದ ಕೃಷಿ ಮಂತ್ರಾಲಯದಿಂದ ಅತ್ಯುತ್ತಮ ಕೃಷಿ ಉದ್ದಿಮೆದಾರ ಪ್ರಶಸ್ತಿಯೂ ಲಭಿಸಿದೆ. ರಾಜ್ಯದ ಅನೇಕ ಕೃಷಿ ಪದವೀಧರರಿಗೆ ಉತ್ತೇಜನ ನೀಡುತ್ತಾ ಯುವ ಸಮುದಾಯಕ್ಕೆ ಅವರು ಪ್ರೇರಣೆಯಾಗಿದ್ದಾರೆ.