Sidlaghatta : ಶಿಡ್ಲಘಟ್ಟ ನಗರ ಠಾಣೆಯಲ್ಲಿ ಬುಧವಾರ ಆಟೋ ಚಾಲಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿತ್ತು.
ಚಾಲಕರನ್ನು ಉದ್ದೇಶಿಸಿ ಮಾತನಾಡಿದ ಅವರು, “ಪ್ರಯಾಣಿಕರು ನಿಮ್ಮನ್ನು ನಂಬಿ ಆಟೋದಲ್ಲಿ ಕೂರುತ್ತಾರೆ. ನಿಮಗೂ ಕುಟುಂಬವಿದೆ ಎಂಬ ಅರಿವಿನೊಂದಿಗೆ ಆಟೋ ಓಡಿಸಬೇಕು. ಕುಡಿದು ವಾಹನ ಚಲಾಯಿಸಬಾರದು. ಅಶಿಸ್ತು ತೋರಿದರೆ ಕಠಿಣ ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಕಡ್ಡಾಯವಾಗಿ ವಾಹನಕ್ಕೆ ವಿಮೆ ಮಾಡಿಸಿರಬೇಕು, ಪರವಾನಗಿ ಹೊಂದಿರಬೇಕು. ಇವುಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದು ಕಡೆಯ ಎಚ್ಚರಿಕೆಯಾಗಿದೆ. ಪ್ರಯಾಣಿಕರಿಂದ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಕೇಳಿ ಬರುತ್ತಿವೆ. ಹೀಗಾಗಿ ಎಲ್ಲಾ ಚಾಲಕರ ಜೊತೆ ಸಭೆ ನಡೆಸಲಾಗುತ್ತಿದೆ” ಎಂದು ಹೇಳಿದರು.
“ಆಟೋಗಳನ್ನು ರಸ್ತೆ ಬದಿ ಅಡ್ಡ ದಿಡ್ಡಿ ನಿಲ್ಲಿಸಿ, ಬೇರೆ ವಾಹನ ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದು ಕಂಡುಬಂದಿದೆ. ಅಲ್ಲದೇ ಹೆಣ್ಣುಮಕ್ಕಳನ್ನು ಚುಡಾಯಿಸುವುದೂ ನಮ್ಮ ಗಮನಕ್ಕೆ ಬಂದಿದೆ. ಇಂತಹ ವರ್ತನೆ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಆ ಭಾಗದ ನಿಲ್ದಾಣವನ್ನೇ ರದ್ದುಪಡಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಗರದ ಎಲ್ಲಾ ಆಟೋ ಚಾಲಕರಿಗೆ ಸಾಮೂಹಿಕವಾಗಿ ಸಮವಸ್ತ್ರವನ್ನು ವಿತರಿಸಿದರು.