Bashettahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬೈರಗಾನಹಳ್ಳಿ ಗ್ರಾಮದಲ್ಲಿ ಸಂಶಯಾಸ್ಪದ ಜ್ವರದ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರದಲ್ಲಿ ಜ್ವರಗಳ ತಪಾಸನೆ ಮಾಡಿ, ಚಿಕಿತ್ಸೆಯನ್ನು ನೀಡಲಾಯಿತು. ಗ್ರಾಮದೆಲ್ಲೆಡೆ ಸಂಚರಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಲಾರ್ವ ಸಮೀಕ್ಷೆ ನಡೆಸಿ, ಜನರಿಗೆ ಅರಿವು ಮೂಡಿಸಿದರು.
ಮಳೆ ನೀರು ಸಂಗ್ರಹವಾಗಿ ಈಡಿಸ್ ಸೊಳ್ಳೆ ಉತ್ಪತ್ತಿಯಾಗುವ ಸಂಭವವಿದ್ದು, ಸಾರ್ವ ಜನಿಕರು ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಗಳನ್ನು ಕೈಗೊಳ್ಳುವುದಕ್ಕೆ ಮುಂದಾಗಬೇಕೆಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.
ಕಳೆದ ಕೆಲವು ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿದೆ. ರಸ್ತೆ, ಚರಂಡಿ ಸೇರಿದಂತೆ ವಿವಿಧೆಡೆ ನೀರು ನಿಂತುಕೊಂಡು ಸೊಳ್ಳೆಗಳ ಲಾರ್ವ ಉತ್ಪತ್ತಿಯಾಗುವ ಸಂಭವವಿದೆ. ನಿರಂತರವಾಗಿ ಮಳೆ ಬಂದರೆ ಲಾರ್ವಗಳು ಕೊಚ್ಚಿ ಹೋಗಲಿದೆ. ಆದರೆ ಮಳೆ ನಿಂತರೆ ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತದೆ. ಇದರಿಂದ ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ ಅವರು, ಮನೆಯ ಒಳಗೆ ಮತ್ತು ಹೊರಗೆ ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ಈಡಿಸ್ ಈಜಿಪ್ಟೈ ಎಂಬ ಹೆಣ್ಣು ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡುತ್ತವೆ ಎಂದು ಎಚ್ಚರಿಸಿದರು.
ಶಿಬಿರದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೆಂಕಟೇಶಮೂರ್ತಿ, ಆರೋಗ್ಯ ನಿರೀಕ್ಷಕ ದೇವರಾಜ್, ವೈದ್ಯಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಮತ್ತು ಆರ್.ಬಿ.ಎಸ್.ಕೆ ವೈದ್ಯರು, ಐಸಿಟಿಸಿ ಸಿಬ್ಬಂದಿ . ಶಾಲಾ ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು