Sidlaghatta : ಶಿಡ್ಲಘಟ್ಟದ ರೈಲ್ವೆ ನಿಲ್ದಾಣದ ಬಳಿ ರೈಲ್ವೆಗೆ ಸೇರಿರುವ ಸರಿಸುಮಾರು ಏಳು ಎಕರೆ ಪ್ರದೇಶದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸದಸ್ಯರು ಮತ್ತು ಕೆ.ವಿ.ಟ್ರಸ್ಟ್ ಹಿರಿಯ ವಿದ್ಯಾರ್ಥಿಗಳು ನೆಟ್ಟು ಬೆಳೆಸುತ್ತಿದ್ದು, ಅವುಗಳಲ್ಲಿ ಒಣಗಿ ಹೋಗಿರುವ ಗಿಡಗಳ ಜಾಗದಲ್ಲಿ ಸುಮಾರು 250 ಗಿಡಗಳನ್ನು ನೆಡಲಾಯಿತು.
ಹಿಂದೆ ಹಲವು ಎಕರೆಗಳಷ್ಟು ರೈಲ್ವೆ ಜಾಗ ಖಾಲಿಯಾಗಿತ್ತು. ಅದರಲ್ಲಿ ಊರ ಕಸ ಸುರಿಯಲಾಗುತ್ತಿತ್ತು. ನಿರ್ವಹಣೆ ಇಲ್ಲದ ಆ ಸ್ಥಳದಲ್ಲಿ ಕಳೆಗಿಡಗಳು, ಮುಳ್ಳುಕಂಟಿಗಳೆಲ್ಲಾ ಬೆಳೆದಿದ್ದವು. ಜೆಸಿಬಿ ಬಳಸಿ, ಕಸ ತೆಗೆದವು. ಗಿಡ ತರಲು ಹಣ ಬೇಕಿತ್ತು. ರೈತ ಸಂಘದವರು ಮತ್ತು ಕೆ.ವಿ.ಟ್ರಸ್ಟ್ ಹಳೆ ವಿದ್ಯಾರ್ಥಿಗಳು ಜತೆಗೂಡಿ, ರೈಲ್ವೆ ಅಧಿಕಾರಿ ಅನುಮತಿ ಪಡೆದು ಸುಮಾರು ಎರಡು ಹಂತಗಳಲ್ಲಿ 1000 ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಇದೀಗ ಮೂರನೇ ಹಂತದ ಗಿಡ ನೆಡುವ ಕೆಲಸ ಪ್ರಾರಂಭವಾಗಿದೆ.
ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, “ನಗರದ ನಟ್ಟ ನಡುವೆ ಸುಮಾರು ಏಳು ಎಕರೆ ಪ್ರದೇಶವನ್ನು ಹಸುರೀಕರಣ ಮಾಡುವ ಪ್ರಯತ್ನದಲ್ಲಿದ್ದೇವೆ. ನಗರದ ಜನರಿಗೆ ಉತ್ತಮ ಆಮ್ಲಜನಕ, ಸಂಜೆ ಹೊತ್ತು ಮತ್ತು ಬೆಳಗಿನ ಹೊತ್ತಿನಲ್ಲಿ ಓಡಾಡಲು ಸುಂದರ ತಾಣ ಸೃಷ್ಟಿಸುವ ಪ್ರಯತ್ನ ನಮ್ಮದು” ಎಂದು ಹೇಳಿದರು.
ಶಾಸಕ ಬಿ.ಎನ್.ರವಿಕುಮಾರ್ ಅವರು ನಗರದ ಎಲ್ಲೆಡೆ ತ್ಯಾಜ್ಯವನ್ನೆಲ್ಲಾ ತೆಗೆಸುತ್ತಿದ್ದು, ಚರಂಡಿಗಳನ್ನೆಲ್ಲಾ ಸ್ವಚ್ಛಗೊಳಿಸುವ ಕಾರ್ಯಕ್ಕೆ ತಮ್ಮ ಸ್ವಂತ ಹಣ ವಿನಿಯೋಗಿಸುತ್ತಿದ್ದಾರೆ. ರೈಲ್ವೆಗೆ ಸೇರಿರುವ ಸ್ಥಳದಲ್ಲಿ ಕೂಡ ತ್ಯಾಜ್ಯ, ಕಳೆಗಿಡಗಳನ್ನೆಲ್ಲಾ ತೆಗೆಸಿ ಸ್ವಚ್ಛಗೊಳಿಸಲಾಗಿತ್ತು. ಹೀಗಾಗಿ ಸಾಕಷ್ಟು ಗಿಡ ನೆಡಲು ಅನುಕೂಲಕರವಾಗಿದೆ.
“2019ರ ಆಗಸ್ಟ್ 25 ರಂದು ಮೊದಲ ಹಂತವಾಗಿ 300 ಸಸಿಗಳನ್ನು ನೆಡಲಾಯಿತು. ನವೆಂಬರ್‌ನಲ್ಲಿ 700 ಗಿಡಗಳನ್ನು ನೆಡಲಾಯಿತು. ಚರಂಡಿ ನೀರನ್ನು ಶೇಖರಿಸಿ, ಅದನ್ನು ಶುದ್ದೀಕರಿಸಿ ಗಿಡಗಳಿಗೆ ಹಾಯಿಸುತ್ತಿದ್ದೆವು. ಎಳೆಗಿಡಗಳನ್ನು ಕೆಲವರು ಮುರಿದರೆ, ಮೇಕೆ, ಕುರಿ ಮೇಯಿಸುವವರಿಂದ ಕೆಲವಾರು ಗಿಡಗಳನ್ನು ನಾವು ಕಳೆದುಕೊಳ್ಳಬೇಕಾಯಿತು. ಪೈಪ್ ಲೈನ್ ಗಳು ಹಸು ಎಮ್ಮೆಗಳ ಓಡಾಟದಿಂದ ಹಾಳಾಗುತ್ತಿದ್ದವು. ಇಷ್ಟಾದರೂ ನಾವು ಹಾಕಿದವುಗಳಲ್ಲಿ ಶೇ 75 ರಷ್ಟು ಗಿಡಗಳನ್ನು ಉಳಿಸಿಕೊಂಡಿದ್ದೇವೆ ಎಂಬ ಖುಷಿ ಇದೆ. ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದಾಗಿ ಹಲವಾರು ಗಿಡಗಳನ್ನು ಕಳೆದುಕೊಂಡಿದ್ದೇವೆ. ರೈಲ್ವೆ ಅಧಿಕಾರಿಗಳು ಕಾಂಪೌಂಡ್ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಆಗ ಗಿಡಗಳನ್ನೆಲ್ಲಾ ಉಳಿಸಿಕೊಳ್ಳಬಹುದು” ಎಂದು ಕೆ.ವಿ.ಟ್ರಸ್ಟ್ ಹಿರಿಯ ವಿದ್ಯಾರ್ಥಿ ಪಿ.ಎಸ್. ಅನಿಲ್ ಕುಮಾರ್ ತಿಳಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ತಾಲ್ಲೂಕು ಉಪಾಧ್ಯಕ್ಷ ರಾಮಚಂದ್ರಪ್ಪ, ಪದಾಧಿಕಾರಿಗಳಾದ ಗುಡಿಹಳ್ಳಿ ಕೆಂಪಣ್ಣ, ಪಿ.ವಿ.ದೇವರಾಜ್, ನಾಗರಾಜ್, ರಾಮಕೃಷ್ಣಪ್ಪ, ಕೆ.ವಿ.ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿ ಅನಿಲ್‌ಕುಮಾರ್ ಹಾಜರಿದ್ದರು