Sidlaghatta : ನಾವು ಇಂದು ಆರೋಗ್ಯಯುತ ಬದುಕನ್ನು ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ಪ್ರಕೃತಿಯಲ್ಲಿನ ಎಲ್ಲ ಕ್ರಿಮಿ, ಕೀಟ, ಪಕ್ಷಿ, ಪ್ರಾಣಿಗಳನ್ನು ಒಳಗೊಂಡ ಪರಿಸರ ಕಾರಣ ಎಂದು ಪ್ರಾದೇಶಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ರಾಜೇಶ್ ಗವಾಲ್ ತಿಳಿಸಿದ್ದಾರೆ. ಸರಕಾರ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಫೆಬ್ರವರಿ 14ರಿಂದ 17ರವರೆಗೆ ನಡೆಯುತ್ತಿರುವ ಪಕ್ಷಿ ಗಣತಿ ಕಾರ್ಯದ ಅಂಗವಾಗಿ, ಈ ಗಣತಿ ಹೇಗೆ ನಡೆಯುತ್ತದೆ ಮತ್ತು ಅದರ ಉಪಯೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಎಫ್‌ಇಎಸ್ ಸಂಸ್ಥೆಯವರು ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಕರೆದೊಯ್ದರು.
ಈ ಸಂದರ್ಭದಲ್ಲಿ ರಾಜೇಶ್ ಗವಾಲ್ ಮಾತನಾಡಿ, ವಿಶ್ವದಾದ್ಯಂತ ಫೆಬ್ರವರಿ 14ರಿಂದ 17ರವರೆಗೆ ನಾಲ್ಕು ದಿನಗಳ ಕಾಲ ಗ್ರೇಟ್ ಬ್ಯಾಕ್ ಯಾರ್ಡ್ ಬರ್ಡ್ ಕೌಂಟಿಂಗ್ ನಡೆಯುತ್ತಿದ್ದು, ನಮ್ಮ ಸುತ್ತಮುತ್ತಲಿನ ಪಕ್ಷಿಗಳನ್ನು ಗಣತಿ ಮಾಡುವ ಕಾರ್ಯ ನಡೆಯುತ್ತದೆ ಎಂದರು. ಪರಿಸರ ಸಮತೋಲನದಲ್ಲಿ ಪಕ್ಷಿಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಗಣತಿ ಕಾರ್ಯದ ಮೂಲಕ ಯಾವ ಪಕ್ಷಿ ಸಂತತಿ ಹೆಚ್ಚಿದೆ, ಯಾವುದು ಕ್ಷೀಣಿಸುತ್ತಿದೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ಸಂಬಂಧಿತ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಹಾಗೂ ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಇದರಿಂದ ಪಕ್ಷಿ ಸಂಕುಲವನ್ನು ಉಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಹಾಯವಾಗಲಿದೆ. ಪ್ರಪಂಚದಲ್ಲಿ 11,500ಕ್ಕೂ ಹೆಚ್ಚು ಪಕ್ಷಿ ಜಾತಿಗಳಿದ್ದು, 1200 ರಿಂದ 1300 ಜಾತಿಗಳು ಮಾತ್ರ ನಿಯಮಿತವಾಗಿ ಕಾಣಸಿಗುತ್ತವೆ. ಶಿಡ್ಲಘಟ್ಟ ತಾಲೂಕಿನಲ್ಲಿ ಮಾತ್ರ 150 ರಿಂದ 250 ವಿವಿಧ ಪಕ್ಷಿ ಜಾತಿಗಳನ್ನು ಕಾಣಬಹುದು ಎಂದರು.
ಪರಿಸರ ಭದ್ರತಾ ಪ್ರತಿಷ್ಠಾನ ಸಂಸ್ಥೆಯ (ಎಫ್‌ಇಎಸ್) ಉಪಯೋಜನಾಧಿಕಾರಿ ಎಸ್.ಜಿ.ಗೋಪಿ ಮಾತನಾಡಿ, ಪರಿಸರದ ಮೇಲಿನ ಮಾನವನ ದಬ್ಬಾಳಿಕೆ, ಅತಿಕ್ರಮಣ, ಹೆಚ್ಚಾದ ರಸಗೊಬ್ಬರ ಹಾಗೂ ಕ್ರಿಮಿನಾಶಕಗಳ ಬಳಕೆಯಿಂದ ಪಕ್ಷಿ ಸಂಕುಲ ಹಳಿಸತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅನಗತ್ಯ ಹಾಗೂ ಹೆಚ್ಚಾದ ಪ್ಲಾಸ್ಟಿಕ್ ಬಳಕೆ, ರಾಜಕಾಲುವೆ ಹಾಗೂ ಪೋಷಕ ಕಾಲುವೆಗಳಿಗೆ ನೀರು ಹೋಗದಂತೆ ಮಾಡುವುದರಿಂದ ಜಲಾಶಯಗಳು ಒಣಗುತ್ತಿದ್ದು, ಪಕ್ಷಿಗಳು ವಾಸಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಈ ಕಾರಣಗಳಿಂದ ಪಕ್ಷಿಗಳು ಬದುಕುವ ಪರಿಸ್ಥಿತಿ ಹದಗೆಟ್ಟಿದೆ ಎಂದರು.
ನಮ್ಮ ಸುತ್ತಮುತ್ತಲಿನ ಪರಿಸರ ಸಮತೋಲನಕ್ಕೆ ಮತ್ತು ಕೃಷಿ ಉಳಿವಿಗೆ ಪಕ್ಷಿ ಹಾಗೂ ಪ್ರಾಣಿ ಸಂತತಿ ಬಹುಮುಖ್ಯವಾದ್ದರಿಂದ ನಾವು ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು. ಸ್ಥಳೀಯ ಸಂಸ್ಥೆಗಳು, ಸಂಘ ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಜನರು ಪ್ರಾಣಿ, ಪಕ್ಷಿ, ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಜಯಚಂದ್ರ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಲೋಕೇಶ್, ಕಾಶಿನಾಥ್, ನವೀನ್ ಹಾಗೂ ಎಫ್‌ಇಎಸ್ ಸಂಸ್ಥೆಯ ನರೇಂದ್ರಬಾಬು, ರಮೇಶ್ ಮತ್ತು ವರದನಾಯಕನಹಳ್ಳಿ ಸರಕಾರಿ ಶಾಲೆಯ ಮಕ್ಕಳು ಭಾಗವಹಿಸಿದ್ದರು.