Sidlaghatta : ಈಗಿನ ಜಗತ್ತಿನಲ್ಲಿ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳನ್ನೂ ಆವರಿಸಿದ್ದು, ಇದನ್ನು ಬಳಸಿಕೊಳ್ಳದೆ ಅಭಿವೃದ್ದಿ ಸಾಧ್ಯವಿಲ್ಲ. ಬದುಕು ಕೂಡ ತಂತ್ರಜ್ಞಾನವನ್ನು ಅವಲಂಬಿಸಿಯೇ ಸಾಗಬೇಕು ಎಂದು ಶಾರದಾ ವಿದ್ಯಾ ಸಂಸ್ಥೆಯ ಶ್ರೀಕಾಂತ್ ಅಭಿಪ್ರಾಯಪಟ್ಟರು.
ನಗರದ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾದ ರೊಬೋಟಿಕ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಇತ್ತೀಚಿನ ವರ್ಷಗಳಲ್ಲಿ ರೊಬೋಟಿಕ್ ತಂತ್ರಜ್ಞಾನ ಪ್ರಚಲಿತ ಹಾಗೂ ಅಗತ್ಯವಾಗುತ್ತಿದೆ. ಈ ತಂತ್ರಜ್ಞಾನ ಕುರಿತು ಶಾಲಾ ಮಕ್ಕಳಲ್ಲಿ ಹೆಚ್ಚಿನ ಜ್ಞಾನ ಮತ್ತು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಈ ವಿಜ್ಞಾನ ವಸ್ತುಪ್ರದರ್ಶನ ಆಯೋಜಿಸಲಾಗಿದೆ,” ಎಂದು ತಿಳಿಸಿದರು.
ಸುಮಾರು 25ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡಗಳು ರೊಬೋಟಿಕ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ವೈವಿಧ್ಯಮಯ ವಸ್ತುಪ್ರದರ್ಶನಗಳನ್ನು ನಡೆಸಿದ್ದು, ಪೋಷಕರು ಹಾಗೂ ಸಾರ್ವಜನಿಕರಿಗೆ ವಿವರಗಳನ್ನು ನೀಡುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎ.ಆರ್. ಮುನಿರತ್ನಂ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಸುಗುಣ, ಕಾರ್ಯದರ್ಶಿ ಸುಮನ್, ಪ್ರಿನ್ಸಿಪಾಲ್ ಕೆ.ಮೂರ್ತಿ ಸಾಮ್ರಾಟ್, ಮುಖ್ಯ ಶಿಕ್ಷಕ ರಾಜೇಶ್, ಸಿದ್ದರಾಜು, ವ್ಯವಸ್ಥಾಪಕ ನಿರ್ದೇಶಕಿ ವಂದನ, ನರಸಿಂಹಮೂರ್ತಿ ಹಾಗೂ ಯುವಿ ಪೆಪ್ ಸಂಸ್ಥೆಯ ಕಿರಣ್ ಉಪಸ್ಥಿತರಿದ್ದರು.