Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಸಾರಿಗೆ ಬಸ್ ನಿಲ್ದಾಣದಿಂದ ಕೋಟೆ ವೃತ್ತದ ವರೆಗೆ ಸ್ವತಃ ಜಿಲ್ಲಾಧಿಕಾರಿ ಪಿ. ಎನ್ ರವೀಂದ್ರ ಅವರು ಪೌರಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯ ನಿರ್ವಹಿಸಿದರು. ಅದಕ್ಕೆ ಶಾಸಕ ಬಿ.ಎನ್. ರವಿಕುಮಾರ್ ಕೈಜೋಡಿಸಿದರು.
ಸ್ವಚ್ಚತಾ ಕಾರ್ಯದೊಂದಿಗೆ ನಗರ ಪರಿವೀಕ್ಷಣೆ ಮಾಡುವ ವೇಳೆ ಕೆಲವರು ಅಕ್ರಮವಾಗಿ ಫುಟ್ ಪಾತ್ ಒತ್ತುವರಿ ಮಾಡಿಕೊಂಡಿರುವುದನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು ಸ್ವತಃ ಅವರೇ ತೆರವುಗೊಳಿಸುವ ಕಾರ್ಯಾಚರಣೆಗೆ ಚಾಲನೆ ನೀಡಿ ಇಂದು ಸಂಜೆಯೊಳಗೆ ಫುಟ್ ಪಾತ್ ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪೌರಾಯುಕ್ತರಿಗೆ ಸೂಚನೆ ನೀಡಿದರು.
ಶಿಡ್ಲಘಟ್ಟ ನಗರದ ಮುಖ್ಯ ರಸ್ತೆಯಾಗಿರುವ ಟಿ.ಬಿ ರಸ್ತೆಯಲ್ಲಿನ ಇಕ್ಕೆಲಗಳಲ್ಲಿನ ಮನೆಯ ಹಾಗೂ ಅಂಗಡಿಗಳಿಗೆ ಭೇಟಿ ನೀಡಿ ತಮ್ಮ ತಮ್ಮ ಮನೆಯಲ್ಲಿ ಒಣ ಮತ್ತು ಹಸಿ ಕಸವನ್ನು ವಿಂಗಡಿಸಿಕೊಂಡು ಕಸ ಸಂಗ್ರಹಣೆ ವಾಹನಕ್ಕೆ ನೀಡುವ ಮೂಲಕ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಸಹಕರಿಸಬೇಕೆಂದು ನಾಗರಿಕರಿಗೆ ಈ ವೇಳೆ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಮನವಿ ಮಾಡಿದರು.
ನಗರದ ಕೋಟೆ ವೃತ್ತದಲ್ಲಿ ಸರ್ಕಾರಿ ಶಾಲೆಯ ಮುಂದೆ ಕಸವನ್ನು ಶೇಖರಣೆ ಮಾಡಿ ಬ್ಲಾಕ್ ಸ್ಪಾಟ್ ಮಾಡಿಕೊಂಡಿರುವುದನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿ ಶಾಲೆಯ ಸುತ್ತಮುತ್ತಲು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮುಖ್ಯ ಶಿಕ್ಷಕರಿಗೆ ನಿರ್ದೇಶನ ನೀಡಬೇಕೆಂದು ಶಿಡ್ಲಘಟ್ಟ ತಹಶೀಲ್ದಾರ್ ಸ್ವಾಮಿ ಅವರಿಗೆ ಸೂಚಿಸಿದರು.
ಇದೇ ವೇಳೆ ಕೋಟೆ ವೃತ್ತದ ಬಳಿ ಚಹಾ ಅಂಗಡಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅಲ್ಲಿನ ನೈರ್ಮಲ್ಯ ಹದಗೆಟ್ಟಿರುವುದನ್ನು ಹಾಗೂ ಫುಟ್ ಪಾತ್ ಒತ್ತುವರಿ ಮಾಡಿರುವುದನ್ನು ನೋಡಿ ಹೋಟೆಲ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಹೋಟೆಲ್ ಮಾಲೀಕನಿಗೆ ನೋಟಿಸ್ ನೀಡಿ ಹೋಟೆಲ್ ಮುಚ್ಚಲು ಕ್ರಮ ಕೈಗೊಳ್ಳಬೇಕೆಂದು ಪೌರಾಯುಕ್ತರಿಗೆ ನಿರ್ದೇಶನ ಮಾಡಿದರು.
ನಗರದ ಎರಡನೇ ಟಿಎಂಸಿ ಬಡಾವಣೆ, ಎರಡನೇ ಕಾರ್ಮಿಕ ನಗರ ಪ್ರದೇಶಕ್ಕೆ ತೆರಳಿದ ಜಿಲ್ಲಾಧಿಕಾರಿ ಅಲ್ಲಿ ರಸ್ತೆ ಚರಂಡಿಗಳ ಪರಿಸ್ಥಿತಿಯನ್ನು ಅವಲೋಕಿಸಿ, ಅಮೃತ ನಗರ ಯೋಜನೆಯಡಿ ನಗರಕ್ಕೆ ಅಗತ್ಯವಾಗಿ ಬೇಕಾಗಿರುವ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲು ನಗರಸಭೆಯಲ್ಲಿ ಚರ್ಚಿಸಿ ಒಂದು ಪ್ರಸ್ತಾವನೆ ಸಲ್ಲಿಸಿದರೆ ಕೂಡಲೆ ಅದಕ್ಕೆ ಅನುಮೋದನೆ ನೀಡುವುದಾಗಿ ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಕಳೆದ ವರ್ಷ ಮಳೆಯಿಂದ ಹಾನಿಯಾಗಿರುವ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗಾಗಿ ವಿಶೇಷ ನೆರವು ನೀಡಲು ಕ್ರಮ ಕೈಗೊಳ್ಳುವುದಾಗಿ ಇದೇ ವೇಳೆ ಅವರು ಆಶ್ವಾಸನೆ ನೀಡಿದರು.
ಶಿಡ್ಲಘಟ್ಟ ನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಂ. ರೇಣುಕಾ, ತಹಶೀಲ್ದಾರ್ ಬಿ.ಎನ್. ಸ್ವಾಮಿ, ಪೌರಾಯುಕ್ತ ಆರ್. ಶ್ರೀಕಾಂತ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಮುಖಂಡರಾದ ತಾದೂರು ರಘು, ನಂದ್‌ಕಿಶನ್(ನಂದು), ಹನುಮಂತಪುರ ವಿಜಯಕುಮಾರ್, ಮದೀನಾ ಮಸೀದಿಯ ಅಧ್ಯಕ್ಷ ಎಚ್.ಎಸ್. ಫಯಾಝ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪೌರ ಕಾರ್ಮಿಕರು ಮತ್ತು ಸಾರ್ವಜನಿಕರು ಹಾಜರಿದ್ದರು.