Home Sidlaghatta ವಯೋವೃದ್ದರ ಅನುಕೂಲಕ್ಕೆ ನ್ಯಾಯಾಲಯದಲ್ಲಿ ಲಿಫ್ಟ್ ವ್ಯವಸ್ಥೆ ಕಲ್ಪಿಸಬೇಕು

ವಯೋವೃದ್ದರ ಅನುಕೂಲಕ್ಕೆ ನ್ಯಾಯಾಲಯದಲ್ಲಿ ಲಿಫ್ಟ್ ವ್ಯವಸ್ಥೆ ಕಲ್ಪಿಸಬೇಕು

0

Sidlaghatta : ಹೈಕೋರ್ಟ್‌ ನ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಯೂ ಆದ ಆರ್.ರವಿ ವೆಂಕಟಪ್ಪ ಹೊಸಮನಿ ಅವರು ಶಿಡ್ಲಘಟ್ಟದಲ್ಲಿನ ನ್ಯಾಯಾಲಯಕ್ಕೆ ಶನಿವಾರ ಭೇಟಿ ನೀಡಿದ್ದರು.

ನ್ಯಾಯಾಲಯಕ್ಕೆ ಭೇಟಿ ನೀಡಿದ ಅವರು, ನ್ಯಾಯಾಲಯದಲ್ಲಿ ಕಕ್ಷಿದಾರರು, ವಕೀಲರು ಹಾಗೂ ಸಾರ್ವಜನಿಕರಿಗೆ ಒದಗಿಸಿದ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.

ನ್ಯಾಯಾಲಯವು ಮೂರಂತಸ್ತಿನ ಕಟ್ಟಡವಾಗಿದ್ದು ಲಿಫ್ಟ್ ವ್ಯವಸ್ಥೆ ಇಲ್ಲದಿರುವುದು, ನ್ಯಾಯಾಲಯದ ಕಟ್ಟಡ ನಿರ್ಮಾಣವಾದಾಗಲೆ ಕ್ಯಾಂಟೀನ್ ಕಟ್ಟಡ ನಿರ್ಮಾಣವಾಗಿದ್ದರೂ ಸರ್ಕಾರ ನಿಗಧಿಪಡಿಸಿದ ಬಾಡಿಗೆ ಹೆಚ್ಚು ಎನ್ನುವ ಕಾರಣಕ್ಕೆ ಯಾರೂ ಟೆಂಡರ್ ಕರೆಯದೆ ಕ್ಯಾಂಟೀನ್ ಕಟ್ಟಡ ಖಾಲಿ ಇರುವುದು ಸೇರಿ ಹತ್ತು ಹಲವು ಸಮಸ್ಯೆಗಳು ಅವರ ಗಮನಕ್ಕೆ ಬಂತು.

ನ್ಯಾಯಾಲಯಕ್ಕೆ ಸಲ್ಲಿಕೆಯಾಗುವ ಪ್ರಕರಣಗಳ ಸಂಖ್ಯೆ, ಇತ್ಯರ್ಥವಾಗುತ್ತಿರುವ ಪ್ರಕರಣ ಶೇಕಡಾವಾರು ಪ್ರಮಾಣ, ಬಾಕಿ ಇರುವ ವ್ಯಾಜ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.

ಆಡಳಿತಾತ್ಮಕ ದೃಷ್ಟಿಯಿಂದ ಅಗತ್ಯವಾಗಿರುವ ಎಲ್ಲ ಅಂಕಿ ಅಂಶ ಮಾಹಿತಿಯನ್ನು ಅವರು ಇಲ್ಲಿನ ನ್ಯಾಯಾಧೀಶರಿಂದ ಪಡೆದುಕೊಂಡರು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಅವರು ಇಲ್ಲಿನ ಸಮಸ್ಯೆಗಳ ಕುರಿತು ನ್ಯಾಯಾಧೀಶರಿಗೆ ಮಾಹಿತಿ ನೀಡಿ, ಇಲ್ಲಿ ಹಿರಿಯ ಶ್ರೇಣಿ, ಪ್ರಧಾನ ಸಿವಿಲ್ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯಗಳಿದ್ದು ನಿತ್ಯವೂ ನೂರಾರು ಕಕ್ಷಿದಾರರು, ಸಾರ್ವಜನಿಕರು ಹಾಗೂ ವಕೀಲರು ಆಗಮಿಸುತ್ತಾರೆ.

ಪ್ರಕರಣಗಳ ಸಂಬಂಧ ವಯೋವೃದ್ಧರು ಸಹ ನ್ಯಾಯಾಲಯಕ್ಕೆ ಬರಲಿದ್ದು ಮೂರು ಅಂತಸ್ತಿನ ಕಟ್ಟಡದ ಮೆಟ್ಟಿಲುಗಳನ್ನು ಹತ್ತಿ ಇಳಿಯಲು ಕಷ್ಟ ಪಡುತ್ತಿದ್ದಾರೆ. ಸಾಕಷ್ಟು ವಕೀಲರು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ ನ್ಯಾಯಾಲಯ ಕಟ್ಟಡದಲ್ಲಿ ಲಿಫ್ಟ್ ವ್ಯವಸ್ಥೆಯನ್ನು ಕಲ್ಪಿಸಬೇಕು.

ಹಾಗೆಯೆ ವಕೀಲರ ಸಂಘದಲ್ಲಿ 90 ಕ್ಕೂ ಹೆಚ್ಚು ವಕೀಲರಿದ್ದಾರೆ. ಪ್ರಕರಣಗಳ ಸಂಬಂಧ ಸ್ಥಳೀಯರು ಸೇರಿ ವಿವಿದೆಡೆಯಿಂದ ಆಗಮಿಸುವ ವಕೀಲರಿಗೆ ವಕೀಲರ ಭವನದ ಅಗತ್ಯವಿದೆ. ವಕೀಲರ ಸಂಘದ ಕಾರ್ಯಚಟುವಟಿಕೆಗಳಿಗೂ ಭವನ ಅನಿವಾರ್ಯವಾಗಿದೆ ಎಂದರು.
ಆದ್ದರಿಂದ ವಕೀಲರ ಭವನವನ್ನು ನಿರ್ಮಿಸಬೇಕಿದ್ದು ಅದಕ್ಕೆ ಅಗತ್ಯವಾದ ಅನುದಾನವನ್ನು ಮಂಜೂರು ಮಾಡಿಸಲು ಕ್ರಮವಹಿಸಬೇಕೆಂದು ಮನವಿ ಪತ್ರವನ್ನು ವಕೀಲರ ಸಂಘದಿಂದ ಆಡಳತಾತ್ಮಕ ನ್ಯಾಯಾಧೀಶರಿಗೆ ಸಲ್ಲಿಸಲಾಯಿತು.

ಇದೆ ವೇಳೆ ನ್ಯಾಯಾಲಯದ ಆವರಣದಲ್ಲಿರುವ ಕ್ಯಾಂಟೀನ್ ಕಟ್ಟಡವನ್ನು ಬಾಡಿಗೆಗೆ ನೀಡುವ ವಿಚಾರದಲ್ಲಿನ ಎದುರಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಕ್ಯಾಂಟೀನ್‌ ನ್ನು ಬಾಡಿಗೆಗೆ ನೀಡಲು ಕ್ರಮ ಜರುಗಿಸಬೇಕೆಂದು ಬೇಡಿಕೆಯನ್ನು ಮಂಡಿಸಲಾಯಿತು.

ಇದಕ್ಕೂ ಮುನ್ನ ನ್ಯಾಯಾಧೀಶರಿಗೆ ಶಿಷ್ಠಾಚಾರದಂತೆ ಸ್ವಾಗತ ಕೋರಲಾಯಿತು. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ, ತಾಲ್ಲೂಕು ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೆ.ಪೂಜಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಹಿರಿಯ ವಕೀಲರಾದ ಎಂ.ಪಾಪಿರೆಡ್ಡಿ, ಡಿ.ಎ.ಅಶ್ವಥನಾರಾಯಣ, ಕೃಷ್ಣಮೂರ್ತಿ, ಬೂದಾಳ ವಿಶ್ವನಾಥ್, ಷಹಾಬುದ್ದೀನ್ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version