Chikkatekahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ಫ್ರೆಂಡ್ಸ್ ಕ್ರಿಕೆಟ್ ತಂಡದ ವತಿಯಿಂದ ಮೂರು ದಿನಗಳ ಕಾಲ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಸೋಮವಾರ ನಡೆದ ಫೈನಲ್ ನಲ್ಲಿ ಸಾದಲಿ ಮತ್ತು ಚಿಕ್ಕತೇಕಹಳ್ಳಿ ಫ್ರೆಂಡ್ಸ್ ಕ್ರಿಕೆಟ್ ತಂಡಗಳ ನಡುವೆ ನಡೆದು ಸಾದಲಿ ತಂಡ ವಿಜೇತರಾದರು.
ಚಿಕ್ಕತೇಕಹಳ್ಳಿ ಫ್ರೆಂಡ್ಸ್ ಕ್ರಿಕೆಟ್ ತಂಡ ಅಂತಿಮ ಹಣಾ ಹಣೆಯಲ್ಲಿ ಸಾದಲಿ ತಂಡದ ವಿರುದ್ಧ ಸೋಲೊಪ್ಪಿಕೊಂಡು ದ್ವಿತೀಯ ಸ್ಥಾನಗಳಿಸಿ ಸಂಭ್ರಮಿಸಿದರು. ಸೆಮಿ ಫೈನಲ್ ನಲ್ಲಿ ಮೈಲಪ್ಪನಹಳ್ಳಿ ಹಾಗೂ ಸಾದಲಿ ತಂಡಗಳ ನಡುವೆ ಪಂದ್ಯ ನಡೆದು ಸಾದಲಿ ಫೈನಲ್ ಗೇರಿದರೆ ಮೈಲಪ್ಪನಹಳ್ಳಿ ತಂಡದವರು ತೃತೀಯ ಸ್ಥಾನ ಗಳಿಸಿ ಟ್ರೋಪಿ ಮತ್ತು ಸಮಾಧಾನಕರ ಬಹುಮಾನ ಗಳಿಸಿ ತೃಪ್ತಿ ಪಡೆದುಕೊಂಡರು.
ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾದ ಟೂರ್ನಮೆಂಟ್ ಗೆ ಸುಮಾರು 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ಒಟ್ಟಾರೆ,ಮೂರು ದಿನಗಳ ಕಾಲ ನಡೆದ ಟೂರ್ನಿಯಲ್ಲಿ ಫೈನಲ್ ಪಂದ್ಯ ರೋಚಕ ಮತ್ತು ಮನರಂಜನೆಯ ಪಂದ್ಯವಾಗಿತ್ತು. ಕ್ರಿಕೆಟ್‌ನ ನಿಜವಾದ ಸ್ಪೂರ್ತಿಯನ್ನು ಪ್ರದರ್ಶಿಸಿತು. ಉಭಯ ತಂಡಗಳ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡಿದರು. ಅಂತಿಮವಾಗಿ ಸಾದಲಿ ತಂಡ ಪ್ರಶಸ್ತಿ ಪಡೆದುಕೊಂಡರು.
ಸಾದಲಿ ತಂಡದ ನಾಯಕ ನವೀನ್ ಕುಮಾರ್ ಮಾತನಾಡಿ, ಗ್ರಾಮಾಂತರ ಹಾಗೂ ನಗರ ತಂಡಗಳ ನಡುವೆ ನಡೆದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಅದ್ಬುತವಾಗಿ ನೆರವೇರಿತು. ನಮ್ಮ ಯಶಸ್ಸಿಗೆ ನಮ್ಮ ಶಿಸ್ತು ಮತ್ತು ನಮ್ಮ ಒಗ್ಗಟ್ಟು ಹಾಗೂ ಸೂಕ್ತ ನಿರ್ಣಯ ನಮ್ಮ ಗೆಲುವಿಗೆ ಕಾರಣ ಎಂದರು.
ಫ್ರೆಂಡ್ಸ್ ಕ್ರಿಕೆಟ್ ತಂಡದ ನಾಯಕ ವೆಂಕಟರೆಡ್ಡಿ ಮಾತನಾಡಿ, ಮೂರು ದಿನಗಳ ಕಾಲ ನಡೆದ ಟೂರ್ನಿಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು. ಪಂದ್ಯಗಳಲ್ಲಿ ಯಾವುದೇ ರೀತಿ ಗೊಂದಲಗಳಿಗೆ ಅವಕಾಶ ಮಾಡಿಕೊಡದೆ ಅತ್ಯುತ್ತಮವಾಗಿ ನೆರವೇರಿಸಿಕೊಂಡು ಬಂದು ಅಂತಿಮ ಪಂದ್ಯದಲ್ಲಿ ಸಾದಲಿ ತಂಡ ಜಯಭೇರಿಗಳಿಸಿದ್ದು, ನಾವು ದ್ವಿತೀಯ ಸ್ಥಾನಗಳಿಸಿದ್ದೇವೆ. ಕ್ರೀಡೆ ಎಂದರೆ ಸೋಲು ಗೆಲುವು ಸಹಜ. ಸಾದಲಿ ತಂಡದ ಆಟಗಾರರು ಅದ್ಭುತ ಆಟ ಪ್ರದರ್ಶನ ಮಾಡಿದರು ಎಂದು ಹೇಳಿದರು.
ಟೂರ್ನಿಯಲ್ಲಿ ವಿಜೇತರಾದ ತಂಡಗಳಿಗೆ ಟಿ.ಎಸ್ ಪ್ರದೀಪ್ ಕುಮಾರ್, ಆಂಜಿನಪ್ಪ,ಕೃಷ್ಣಪ್ಪ, ಮಂಜುನಾಥ್ ಪ್ರಶಸ್ತಿ ಹಾಗೂ ಬಹುಮಾನವನ್ನು ವಿತರಿಸಿದರು.