Sidlaghatta : ತಮಿಳುನಾಡಿನ (Tamil Nadu) ಗುಡಿಯಾತ್ತಂ ಜಿಲ್ಲೆಯ ಯುವರಾಜ್(35)ನನ್ನು ಅಪರಿಚಿತ ವ್ಯಕ್ತಿಗಳು ಮಚ್ಚಿನಿಂದ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಶಿಡ್ಲಘಟ್ಟ ನಗರದಲ್ಲಿ ಶನಿವಾರ ನಡೆದಿದ್ದು ಗಂಭೀರವಾಗಿ ಗಾಯಗೊಂಡಿರುವ ಯುವರಾಜ್ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ.
ಮಚ್ಚಿನೇಟಿನಿಂದ ಕತ್ತು ಭಾಗದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವರಾಜ್‌ಗೆ ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ (NIMHANS, Bengaluru) ಗೆ ಕಳುಹಿಸಿಕೊಡಲಾಗಿದೆ.
ತಮಿಳುನಾಡಿನ ಗುಡಿಯಾತ್ತಂ ಜಿಲ್ಲೆಯ ಯುವರಾಜ್ ಶಿಡ್ಲಘಟ್ಟ ತಾಲ್ಲೂಕು ಆನೂರು ಗ್ರಾಮ ಪಂಚಾಯಿತಿಯ ಡಬರಗಾನಹಳ್ಳಿಯ ನಳಿನ ಎನ್ನುವವರನ್ನು ಕಳೆದ ಡಿಸೆಂಬರ್ 12 ರಂದು ಮದುವೆಯಾಗಿದ್ದು, ಆಂದ್ರದ ಬೋಯಿಕೊಂಡದ ಗಂಗಮ್ಮ ದೇವಾಲಯಕ್ಕೆ (Boyakonda Gangamma Temple) ಭಾನುವಾರ ಹೋಗಲು ಯುವರಾಜ್ ಹಾಗೂ ನಳಿನ ಶನಿವಾರ ಡಬರಗಾನಹಳ್ಳಿಗೆ ಬಂದಿದ್ದಾರೆ.
ಕೆಲಸದ ನಿಮಿತ್ತ ಯುವರಾಜ್, ನಳಿನ ಹಾಗೂ ನಳಿನಾಳ ತಾತ ಮೂವರು ಒಂದೇ ಬೈಕ್‌ನಲ್ಲಿ ಶಿಡ್ಲಘಟ್ಟಕ್ಕೆ ಬಂದಿದ್ದು ಶಿಡ್ಲಘಟ್ಟದ ರಾಘವೇಂದ್ರ ಮಠದ ಹಿಂಭಾಗದ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಯುವರಾಜ್ ಮೇಲೆ ಅಪರಿಚಿತರು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ರಸ್ತೆಯು ಹಳ್ಳ ಕೊಳ್ಳಗಳಿಂದ ಕೂಡಿದ್ದು ಬೈಕ್‌ನ್ನು ನಿಧಾನವಾಗಿ ಚಲಿಸುತ್ತಿದ್ದಾಗ ಆಕ್ರಮಣ ನಡೆದಿದೆ. ಮಚ್ಚಿನಿಂದ ಏಟು ಬೀಳುತ್ತಿದ್ದಂತೆ ತಲೆ ಕೆಳಗಿನ ಕತ್ತು ಭಾಗ ಸೀಳಿದ್ದು ಯುವರಾಜ್ ಬೈಕ್‌ನಿಂದ ಕೆಳಗೆ ಬಿದ್ದಿದ್ದಾನೆ. ಬೈಕ್‌ನಲ್ಲಿದ್ದ ನಳಿನ ಹಾಗೂ ಆಕೆಯ ತಾತ ಕೆಳಗೆ ಬಿದ್ದಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ.
ಕತ್ತಿನ ಭಾಗ ಸಾಕಷ್ಟು ತುಂಡಾಗಿದ್ದರಿಂದ ಸ್ಥಳೀಯರು ಆತನನ್ನು ಅಸ್ಪತ್ರೆಗೆ ಕರೆದೊಯ್ಯಲು ಸಹ ಹಿಂದೇಟು ಹಾಕಿದ್ದಾರೆ. ನಗರಠಾಣೆಯ ಪೊಲೀಸರು (Sidlaghatta Town Police) ಸ್ಥಳಕ್ಕೆ ಬಂದಿದ್ದು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು.
ಘಟನೆಯಿಂದ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ. ಘಟನೆ ಕುರಿತಂತೆ ತನಿಖೆ ಹಾಗೂ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ.