Sidlaghatta : ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಲಿವೆ ಎನ್ನುವ ಕಾರಣಕ್ಕೆ ಸುಮಾರು 60 ವರ್ಷಕ್ಕೂ ಹಳೆಯದಾದ ಫಸಲು ನೀಡುತ್ತಿರುವ ರೈತ ನಾರಾಯಣಸ್ವಾಮಿ ಅವರಿಗೆ ಸೇರಿದ 12 ತೆಂಗಿನ ಮರಗಳನ್ನು (Coconut Tree) ಟಿ.ಬುಸ್ನಹಳ್ಳಿಯಲ್ಲಿ ಕತ್ತರಿಸಲಾಗಿದೆ. ರೈತ ಸಂಘದ ಸದಸ್ಯರ ವಿರೋಧದಿಂದಾಗಿ ಇನ್ನುಳಿದ ಮರಗಳನ್ನು ಕತ್ತರಿಸುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
ಶಿಡ್ಲಘಟ್ಟ-ಎಚ್.ಕ್ರಾಸ್ ಮುಖ್ಯ ರಸ್ತೆಯಿಂದ ಟಿ.ಬುಸ್ನಹಳ್ಳಿಯ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಲು ಅನುದಾನ ಬಂದಿದ್ದು, ರಸ್ತೆ ಅಗಲೀಕರಣ ಸಮಯದಲ್ಲಿ ರಸ್ತೆಯ ಅಂಚಿನಲ್ಲಿದ್ದ ತೆಂಗಿನ ಮರಗಳನ್ನು ತೆಗೆಸಲು ಗ್ರಾಮಪಂಚಾಯಿತಿಯು ಮುಂದಾಗಿದೆ.
“ನಮ್ಮ ಅಪ್ಪ ತಾತಂದಿರ ಕಾಲದಿಂದಲೂ ಈ ರಸ್ತೆಯ ಅಂಚಿನಲ್ಲಿ ಈ ತೆಂಗಿನ ಮರಗಳು ಇವೆ. ರಸ್ತೆಯ ಅಭಿವೃದ್ದಿಯನ್ನು ತೆಂಗಿನ ಮರಗಳನ್ನು ಉಳಿಸಿಕೊಂಡೆ ಮಾಡಬಹುದಿತ್ತು. ತೆಂಗಿನ ಮರಗಳಿಂದ ಇದುವರೆಗೂ ಯಾರಿಗೂ ತೊಂದರೆಯಾಗಿಲ್ಲ. ಆದರೆ ರಾಜಕೀಯ ಒತ್ತಡದಿಂದ PDO ಪ್ರಶಾಂತ್ ಅವರು ಏಕಾ ಏಕಿ ಬಂದು ಮರಗಳನ್ನು ಕಡಿದು ಹಾಕಲು ಮುಂದಾದರು. ರೈತ ಸಂಘದವರು ಹಾಗೂ ನಾವು ಅಡ್ಡಿಪಡಿಸಿದ್ದರಿಂದ ಮರಗಳ ಮಾರಣ ಹೋಮ ನಿಂತಿದೆ. ಆದರೂ ಅಷ್ಟರೊಳಗೆ 12 ಮರಗಳನ್ನು ಕಡಿದು ಹಾಕಿದ್ದಾರೆ” ಎಂದು ತೆಂಗಿನ ಮರಗಳ ಮಾಲೀಕ ಹರೀಶ್ ತಿಳಿಸಿದರು.