Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಭಾನುವಾರ ಮಳ್ಳೂರಾಂಭ ದೇವಿಯ ರಥೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.
ಜಿಲ್ಲೆಯಲ್ಲಿ ಪ್ರಸಿದ್ಧ ಪುರಾತನ ದೇವಾಲಯವಾದ ಮಳ್ಳೂರಾಂಭ ದೇವಾಲಯದಲ್ಲಿ ನಡೆದ ಈ ರಥೋತ್ಸವಕ್ಕೆ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ಭಕ್ತರು ದೇವಿಯ ದರ್ಶನ ಪಡೆದು ಪೂಜೆಯಲ್ಲಿ ಪಾಲ್ಗೊಂಡರು. ವಿಶೇಷವಾಗಿ ಅಲಂಕರಿಸಿದ ದೇವಿಯ ರಥವನ್ನು ಭಕ್ತರ ಸಹಕಾರದೊಂದಿಗೆ ಎಳೆಯಲಾಯಿತು. ಬ್ರಹ್ಮರಥೋತ್ಸವಕ್ಕೆ ರಥವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು, ಇದರಿಂದ ಭಕ್ತರು ತೃಪ್ತಿ ಪಡೆದರು.
ಗಾರುಡಿಬೊಂಬೆ, ಕೀಲುಕುದುರೆ, ವೀರಗಾಸೆ, ತಮಟೆ ವಾದನಂತಹ ಸಾಂಸ್ಕೃತಿಕ ಪ್ರದರ್ಶನಗಳು ಭಕ್ತರ ಗಮನ ಸೆಳೆಯುವಂತಿದ್ದವು. ರಥೋತ್ಸವದ ಸಂದರ್ಭದಲ್ಲಿ ತಿಂಡಿ ತಿನಿಸುಗಳು, ಆಟಿಕೆಗಳು, ಅಚ್ಚೆ ಹಾಕುವ ಅಂಗಡಿಗಳು ಹಾಗೂ ದಿನೋಪಯೋಗಿ ವಸ್ತುಗಳ ಮಾರುಕಟ್ಟೆ ಜನಾಕರ್ಷಕವಾಗಿತ್ತು.
ಉಪ ತಹಶೀಲ್ದಾರ್ ಪೂರ್ಣಿಮಾ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಬಿ.ಎನ್. ರವಿಕುಮಾರ್, ಬಿಜೆಪಿ ಮುಖಂಡ ಸೀಕಲ್ ಆನಂದಗೌಡ, ಆರಕ್ಷಕ ವೃತ್ತ ನಿರೀಕ್ಷಕ ಶ್ರೀನಿವಾಸ್, ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಮುನಿರಾಜುಗೌಡ, ಕಾರ್ಯದರ್ಶಿ ವಿ.ವೇಣುಗೋಪಾಲ, ಬಿ.ಎಲ್. ಮುನಿರಾಜು, ಶಾಂತಮ್ಮ ಕೆಂಪಣ್ನ, ಎಂ. ವೆಂಕಟೇಶ್, ಟಿ.ಎಂ. ವೆಂಕಟೇಶಪ್ಪ, ಎನ್. ರಾಕೇಶ್, ವೆಂಕೋಬರಾವ್, ವಿ. ಸುಬ್ರಮಣ್ಯಪ್ಪ, ಕೆ. ನಾಗರಾಜು, ಜಿ. ಚಂದ್ರಪ್ರಸಾದ್ ಹಾಗೂ ಗ್ರಾಮಸ್ಥರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.