Sidlaghatta : ಕಳೆದ 11 ವರ್ಷಗಳ ಹಿಂದೆ ನಡೆದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ರಾಜ್ಯ ಸರ್ಕಾರ ಮುಂದಾಗುವ ಮೂಲಕ ಮೃತಳ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ಎನ್.ಎ.ವೆಂಕಟೇಶ್ ಒತ್ತಾಯಿಸಿದರು.
ನಗರದ ತಾಲ್ಲೂಕು ಕಚೇರಿ ಮುಂಭಾಗ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ 2012 ರ ಅಕ್ಟೋಬರ್ 9 ರಂದು ಸೌಜನ್ಯ ಎಂಬ 17 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಕೆಲ ಕಿಡಿಗೇಡಿಗಳು ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿ ನೇತ್ರಾವತಿ ನದಿ ದಡದಲ್ಲಿ ಆಕೆಯ ಶವವನ್ನು ಬಿಸಾಡಿ ಹೋಗಿದ್ದ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಸಂತೋಷ್‌ರಾವ್ ಎಂಬ ಆರೋಪಿಯನ್ನು ಸ್ಥಳೀಯರು ಪೊಲೀಸರಿಗೆ ಹಿಡಿದುಕೊಟ್ಟರಾದರೂ ನಂತರ ತನಿಖೆ ನಡೆಸಿದ ಪೊಲೀಸರು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿ ವಿಚಾರಣೆ ನಡೆದು 2023 ರ ಜೂ 16 ರಂದು ವಿಶೇಷ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತ್ತು. ಹಾಗಾದರೆ ಸೌಜನ್ಯಳನ್ನು ಕೊಂದವರಾರು? ಎಂಬ ಪ್ರಶ್ನೆ ನಿಗೂಢವಾಗಿಯೇ ಉಳಿದಿದೆ ಎಂದರು.
ಈ ಪ್ರಕರಣದಲ್ಲಿ ಕಾಣದ ಪ್ರಭಾವಿ ವ್ಯಕ್ತಿಗಳ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಸೌಜನ್ಯಳ ಪೋಷಕರು ಹಾಗೂ ಸ್ನೇಹಿತರು ಅನುಮಾನ ವ್ಯಕ್ತಪಡಿಸಿರುವ ಆರೋಪಿಗಳನ್ನು ನಿಷ್ಪಕ್ಷಪಾತವಾಗಿ ವಿಚಾರಣೆಗೆ ಒಳಪಡಿಸಿಲ್ಲ. ಪೋಲೀಸ್ ಅಧಿಕಾರಿಗಳು ಪ್ರಭಾವಿ ವ್ಯಕ್ತಿಗಳ ಮುಲಾಜಿಗೆ ಒಳಗಾಗಿ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿಲ್ಲ. ಹಾಗಾಗಿ ಈ ಪ್ರಕರಣದ ದಿಕ್ಕು ತಪ್ಪಿಸಿರುವ ಪೊಲೀಸ್ ಅಧಿಕಾರಿಗಳು ಹಾಗೂ ಫೊರೆನ್ಸಿಕ್ ವರದಿ ನೀಡಿರುವ ವೈದ್ಯಕೀಯ ತಜ್ಞರನ್ನು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಬೇಕು. ಈ ಮೂಲಕ ಸೌಜನ್ಯಳ ಹತ್ಯೆ ಮಾಡಿರುವ ನಿಜವಾದ ಕೊಲೆಗಾರರನ್ನು ಪತ್ತೆ ಮಾಡಬೇಕಾಗಿದೆ ಎಂದರು.
ಕೂಡಲೇ ಮಾನ್ಯ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸುವ ಯಾವುದಾದರೂ ಒಂದು ತನಿಖಾ ಸಂಸ್ಥೆಗೆ ಅಥವ ಸ್ವತಂತ್ರ್ಯ ನ್ಯಾಯಾಂಗ ತನಿಖೆಗೆ ಒಪ್ಪಿಸುವ ಮೂಲಕ ಮೃತ ಸೌಜನ್ಯಳ ಕುಟುಂಬಸ್ಥರಿಗೆ ನ್ಯಾಯ ದೊರಕಿಸಕೊಡಬೇಕು ಎಂದು ಒತ್ತಾಯಿಸಿ ಗ್ರೇಡ್ 2 ತಹಶೀಲ್ದಾರ್ ಶ್ರೀನಿವಾಸಲುನಾಯ್ಡು ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಚಾಲಕ ಟಿ.ವಿ.ಚಲಪತಿ, ಸಂಘಟನಾ ಸಂಚಾಲಕ ಲಕ್ಕೇನಹಳ್ಳಿ ವೆಂಕಟೇಶ್, ರಾಜಕುಮಾರ್, ದೊಡ್ಡತಿರುಮಳಯ್ಯ, ವಿ.ರಾಮಚಂದ್ರ, ಗಂಗಾಧರಪ್ಪ, ಮುನಿಕದಿರಪ್ಪ, ಜಿ.ಮುನಿಯಪ್ಪ ಹಾಜರಿದ್ದರು.