Sugatutu, Sidlaghatta : ಪರಿಸರಕ್ಕೆ ಹಾನಿಯಾಗದಂತೆ ಎಲ್ಲರೂ ಸಾಂಪ್ರದಾಯಿಕ ದೀಪಾವಳಿಯನ್ನು ಆಚರಿಸಬೇಕಾದ ಅಗತ್ಯತೆ ಇಂದಿಗೆ ಅನಿವಾರ್ಯವಾದುದು. ಅತಿಯಾಗಿ ಶಬ್ಧ ಮತ್ತು ಹೊಗೆಯನ್ನುಂಟು ಮಾಡುವ ಬಾರೀ ಪಟಾಕಿಗಳನ್ನು ಹಚ್ಚಬಾರದು ಎಂದು ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಂದರಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಸಾಂಪ್ರದಾಯಿಕ ದೀಪಾವಳಿ ಆಚರಣೆ, ಪಟಾಕಿ ನಿಷೇಧ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಟಾಕಿಗಳನ್ನು ಹಚ್ಚುವುದರಿಂದ ಉತ್ಪತ್ತಿಯಾಗುವ ಹೊಗೆಯಲ್ಲಿ ಅನೇಕ ರಾಸಾಯನಿಕಗಳಿದ್ದು ಪರಿಸರ, ವಾಯುಮಾಲಿನ್ಯವನ್ನುಂಟು ಮಾಡುತ್ತವೆ. ಭಾರಿ ಶಬ್ಧವು ಪ್ರಾಣಿ, ಪಕ್ಷಿಗಳಿಗೆ ತೊಂದರೆ ಉಂಟುಮಾಡುತ್ತವೆ. ಪಟಾಕಿ ಹಚ್ಚುವುದರಿಂದ ಅನೇಕ ಮಕ್ಕಳು, ವ್ಯಕ್ತಿಗಳು ಕಣ್ಣು, ಕಿವಿಗಳನ್ನು ಕಳೆದುಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ. ಹಸಿರು ಪಟಾಕಿಗಳನ್ನು ಹಚ್ಚುವುದರಿಂದ, ಹಣತೆಗಳನ್ನು ಹಚ್ಚಿ ಅಂಧಕಾರದ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ಬೆಳಗಿಸಿ ದೀಪಾವಳಿ ಆಚರಿಸುವುದು ಅಗತ್ಯ ಎಂದರು.
ಜಾಗೃತಿ ಕಾರ್ಯಕ್ರಮ:
ಶಾಲಾ ವಿದ್ಯಾರ್ಥಿಗಳು ಮಾನವಸರಪಳಿ ರಚಿಸಿ ಘೋಷಣೆಗಳನ್ನು ಕೂಗಿ ಪಟಾಕಿ ನಿಷೇಧದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಭಿತ್ತಿಪತ್ರಗಳ ಪ್ರದರ್ಶನ ನಡೆಯಿತು. ಶಾಲಾ ಆವರಣದಲ್ಲಿ ಸಾಂಪ್ರದಾಯಿಕವಾಗಿ ದೀಪ ಹಚ್ಚಿ ಸಿಹಿ ವಿತರಿಸಿ ದೀಪಾವಳಿ ಆಚರಿಸಿದರು.
ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಶಿಕ್ಷಕಿ ಸುನಿತಾ ಹಾಜರಿದ್ದರು.