Sidlaghatta : ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುವುದನ್ನು ವಿರೋಧಿಸಿ ನಡೆದ ಕರ್ನಾಟಕ ಬಂದ್ ಶಿಡ್ಲಘಟ್ಟದಲ್ಲೂ ನಡೆಯಿತು. ನಾನಾ ರೈತಪರ, ಕನ್ನಡಪರ, ದಲಿತಪರ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿ ಬಂದ್ ನಲ್ಲಿ ಭಾಗವಹಿಸಿದ್ದರು.
ಬಂದ್ ಅನ್ನು ಬೆಂಬಲಿಸಿ ನಾನಾ ಸಂಘಟನೆಗಳ ಪದಾಧಿಕಾರಿಗಳು ಮುಂಜಾನೆ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು. ನಂತರ ಬೈಕ್ ರ್ಯಾಲಿ ಹಾಗೂ ಪಾದಯಾತ್ರೆ ನಡೆಸಿದರು.
ಮೆಡಿಕಲ್ ಸ್ಟೋರ್, ಹಣ್ಣು ತರಕಾರಿ ಹಾಲು ಮೊಸರು ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳು ತೆರೆದಿದ್ದು ಇನ್ನುಳಿದಂತೆ ಬಹುತೇಕ ಎಲ್ಲ ಅಂಗಡಿ ಮುಂಗಟ್ಟು ಹೋಟೆಲ್ ವಾಣಿಜ್ಯ ಸಂಕೀರ್ಣಗಳು ಬಂದ್ ಆಗಿದ್ದವು.
ಆದರೆ ಮದ್ಯಾಹ್ನ ಆಗುತ್ತಿದ್ದಂತೆ ಒಂದೊಂದೆ ಅಂಗಡಿ ದಿನಸಿ ಮಾರಾಟಗಾರರು ಹೋಟೆಲ್ ನವರು ಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸಲಾರಂಭಿಸಿದರು.
ಇನ್ನು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿಲ್ಲವಾದರೂ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಹಾಜರಾತಿ ತೀರಾ ಕಡಿಮೆಯಿತ್ತು. ಮೊದಲೆ ಬಂದ್ ವಿಚಾರ ತಿಳಿದಿದ್ದರಿಂದ ಸರ್ಕಾರಿ ಕಚೇರಿಗಳತ್ತ ಸಾರ್ವಜನಿಕರ ಸುಳಿವೂ ಹೆಚ್ಚೇನೂ ಇರಲಿಲ್ಲ.
ಇನ್ನು ಬ್ಯಾಂಕ್ ಸಿನಿಮಾ ಮಂದಿರ ಬಾಗಿಲು ತೆರೆಯಲಿಲ್ಲ. ರೇಷ್ಮೆಗೂಡಿನ ಮಾರುಕಟ್ಟೆ ಎಂದಿನಂತೆ ಕಾರ್ಯನಿರ್ವಹಿಸಿತು. ಶಿಡ್ಲಘಟ್ಟದಿಂದ ಬೆಂಗಳೂರು ಮಾರ್ಗದಲ್ಲಿ ಸರ್ಕಾರಿ ಬಸ್‌ಗಳು ಕೆಲವೊಂದು ಸಂಚರಿಸಿದವಾದರೂ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಿತ್ತು. ಆಟೋಗಳು ರಸ್ತೆಗೆ ಇಳಿಯಲಿಲ್ಲ. ನಾನಾ ರೈತ, ಕನ್ನಡಪರ, ದಲಿತಪರ ಸಂಘಟನೆಗಳು ನಗರದಲ್ಲಿ ಮೆರವಣಿಗೆ ನಡೆಸಿ, ತಹಶೀಲ್ದಾರ್ ಬಿ.ಎನ್.ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.