Chikkaballapur : ವಿವಿಧ ಸಂಘಟನೆಗಳು ತಮಿಳುನಾಡಿಗೆ (Tamil Nadu) ಕಾವೇರಿ (Cauvery Water Issue) ನೀರು ಹರಿಸುತ್ತಿರುವುದನ್ನು ಖಂಡಿಸಿ ಶುಕ್ರವಾರ ಕರೆ ನೀಡಿದ್ದ ರಾಜ್ಯ ಬಂದ್‌ಗೆ (Karnataka Bundh) ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾಂಕೇತಿಕವಾಗಿ ಎನ್ನುವಂತೆ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ಬಿ.ಬಿ ರಸ್ತೆ, ಎಂ.ಜಿ ರಸ್ತೆ, ಬಜಾರ್ ರಸ್ತೆ, ಗಂಗಮ್ಮ ಗುಡಿ ರಸ್ತೆಯಲ್ಲಿ ವಹಿವಾಟು ಯಥಾ ಪ್ರಕಾರ ನಡೆಯಿತು. ಸ್ವಯಂಪ್ರೇರಿತವಾಗಿ ಕೆಲವು ಶಾಲೆಗಳು ರಜೆ ಘೋಷಿಸಿದ್ದು ಹೊರತು ಪಡಿಸಿದರೆ ಶಾಲಾ ಕಾಲೇಜುಗಳು ಎಂದಿನಂತೆ ನಡೆದವು. ಬಸ್ ಸಂಚಾರ ಆಟೊ ಸಂಚಾರ ಎಂದಿನಂತೆ ಇತ್ತು.
ಚಿಂತಾಮಣಿ
ಚಿಂತಾಮಣಿಯಲ್ಲಿ ಬಂದ್‌ಗೆ ಶುಕ್ರವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮಧ್ಯಾಹ್ನದ ನಂತರ ಪರಿಸ್ಥಿತಿ ಎಂದಿನಂತೆ ಸಹಜವಾಗಿತ್ತು. ನಗರದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಪ್ರತಿಭಟನಾ ಜಾಥಾ, ಬೈಕ್ ಜಾಥಾ, ಉರುಳಿಸೇವೆ, ಮೈಮೇಲೆ ಸಗಣಿ ಸುರಿದುಕೊಂಡು ಪ್ರತಿಭಟನೆ ನಡೆಸಿದರು.
ಗೌರಿಬಿದನೂರು
ಗೌರಿಬಿದನೂರು ನಗರದಲ್ಲಿ ವಿವಿಧ ರೈತಪರ, ಕನ್ನಡಪರ, ದಲಿತಪರ, ವರ್ತಕರು ಸೇರಿದಂತೆ ಇತರ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮಹೇಶ್ ಎಸ್.ಪತ್ರಿ ಅವರಿಗೆ ಮನವಿ ಸಲ್ಲಿಸಿದರು.
ಶಿಡ್ಲಘಟ್ಟ
ಶಿಡ್ಲಘಟ್ಟ ನಗರದಲ್ಲಿ ನಾನಾ ರೈತಪರ, ಕನ್ನಡಪರ, ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಮುಂಜಾನೆ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿ ಬೈಕ್ ರ‍್ಯಾಲಿ ಹಾಗೂ ಪಾದಯಾತ್ರೆ ಮೂಲಕ ತಹಶೀಲ್ದಾರ್ ಬಿ.ಎನ್.ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಬಾಗೇಪಲ್ಲಿ
ಬಾಗೇಪಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗಳ ಒಕ್ಕೂಟದ ಮುಖಂಡರು ಶುಕ್ರವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿ ಗ್ರೇಡ್-2 ತಹಶೀಲ್ದಾರ್ ಸುಬ್ರಮಣ್ಯಂ ಅವರಿಗೆ ಮನವಿ ಸಲ್ಲಿಸಿದರು.