Sidlaghatta : ಪುರಾತನ ನಾಣ್ಯ ಮತ್ತು ನೋಟುಗಳು ವಿದ್ಯಾರ್ಥಿಗಳಿಗೆ ಇತಿಹಾಸದ ಅರಿವು ಮೂಡಿಸುತ್ತವೆ. ಹಳೆಯ ಕಾಲದ ಆರ್ಥಿಕ, ಸಾಮಾಜಿಕ, ಆರ್ಥಿಕ ಮತ್ತು ಐತಿಹಾಸಿಕ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತವೆ ಎಂದು ಪುರಾತನ ನಾಣ್ಯ ಮತ್ತು ನೋಟುಗಳ ಸಂಗ್ರಹಕಾರ ಡಿ.ಕೇಶವಮೂರ್ತಿ ತಿಳಿಸಿದರು.
ತಾಲ್ಲೂಕಿನ ಅಪ್ಫೇಗೌಡನಹಳ್ಳಿಯ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ “ವಿವಿಧ ದೇಶಗಳ ನಾಣ್ಯ ಮತ್ತು ನೋಟುಗಳ ಪ್ರದರ್ಶನ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಣ್ಯಗಳು ಲೋಹವಷ್ಟೇ ಅಲ್ಲ, ಇತಿಹಾಸ ಮತ್ತು ಹಿಂದಿನ ಕಾಲದ ಸ್ಥಿತಿಗತಿಗಳನ್ನು ತಿಳಿಸಿಕೊಡುತ್ತದೆ. ವಿದ್ಯಾರ್ಥಿಗಳು ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ಹೊಂದಿರಬೇಕು. ಇಲ್ಲಿ ಪ್ರದರ್ಶನಗೊಳ್ಳುತ್ತಿರುವ ಹಲವು ದೇಶಗಳ ನಾಣ್ಯ ಮತ್ತು ನೋಟುಗಳು ಒಂದೊಂದು ಕಥೆಯನ್ನು ಹೇಳುತ್ತವೆ. ಅವುಗಳನ್ನು ಆಸಕ್ತಿಯಿಂದ ಅರಿಯಬೇಕು ಎಂದರು.
ಶಿಡ್ಲಘಟ್ಟ ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ಯಾವುದಾದರೂ ಉತ್ತಮ ಹವ್ಯಾಸವನ್ನು ಹೊಂದಿರಬೇಕು. ನೀವು ಯಾವುದೇ ವೃತ್ತಿ ಕೈಗೊಂಡರೂ ಪ್ರವೃತ್ತಿ ಅಥವಾ ಹವ್ಯಾಸ ಇರಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಾಹಿತ್ಯ ಮತ್ತು ಇತಿಹಾಸದ ಅರಿವನ್ನು ಹೊಂದಬೇಕು. ಇವು ವ್ಯಕ್ತಿತ್ವವನ್ನು ರೂಪಿಸಲು ನೆರವಾಗುತ್ತವೆ ಎಂದು ಹೇಳಿದರು.
ತಾಲ್ಲೂಕು ಕಸಾಪ ವತಿಯಿಂದ ಪ್ರದರ್ಶಕ ಡಿ.ಕೇಶವಮೂರ್ತಿ ರವರನ್ನು ಸನ್ಮಾನಿಸಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ನಿಕಟ ಪೂರ್ವ ಅಧ್ಯಕ್ಷ ಎ.ಎಂ.ತ್ಯಾಗರಾಜ್ , ಇಂದಿರಾಗಾಂಧಿ ವಸತಿ ಶಾಲೆ ಶಿಕ್ಷಕರಾದ ಪ್ರಸಾದ್ ಸಿ.ಎ., ಮುರಳೀಧರ , ದಿವಾಕರ್ ರೆಡ್ಡಿ, ಶಶಿ ದೀಪಿಕಾ, ಮಂಜುಳ, ಲಕ್ಷ್ಮೀ ನಾರಾಯಣ, ನರೇಶ್, ಕವಿತ, ಯಶೋದ, ತುಳಸಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.