Sidlaghatta : ಹಾಲು ಪೌಷ್ಟಿಕ ಆಹಾರವಾಗಿದ್ದು, ಸಾರ್ವಜನಿಕರಲ್ಲಿ ಹಾಗೂ ಮಕ್ಕಳಲ್ಲಿ ಹಾಲು ಸರ್ವೋತ್ತಮ ಆಹಾರ ಎನ್ನುವ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ವಿಶ್ವ ಹಾಲು ದಿನವನ್ನು ಆಚರಿಸುತ್ತಿದ್ದೇವೆ ಎಂದು KOCHIMUL ನಿರ್ದೇಶಕ ಆರ್.ಶ್ರೀನಿವಾಸ್ ತಿಳಿಸಿದರು.
ವಿಶ್ವ ಹಾಲು ದಿನಾಚರಣೆ ಅಂಗವಾಗಿ ಶನಿವಾರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋಚಿಮುಲ್ ಶಿಬಿರ ಘಟಕದ ವತಿಯಿಂದ ಒಳರೋಗಿಗಳಿಗೆ ಹಾಲು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದ ಎಲ್ಲಾ ರೈತರಿಗೂ ಎಲ್ಲಾ ಕಾಲಗಳಲ್ಲಿಯೂ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಹೈನೋಧ್ಯಮ ದಿಂದ ಆಗುತ್ತಿದೆ. ಹಾಲಿನಲ್ಲಿ ಮನುಷ್ಯನ ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ಜೀವಸತ್ವಗಳು ಮಿಟಮಿನ್, ಪ್ರೋಟೀನ್ ಗಳಿವೆ. ಹಾಲು Vitamin D ಯಿಂದ ಶ್ರೀಮಂತವಾಗಿರುತ್ತದೆ. ಕ್ಯಾನ್ಸರ್ ಹತ್ತಿಕ್ಕುವ ಸಾಮರ್ಥ್ಯ ಹೊಂದಿರುವ ಸಂಗತಿಗಳಲ್ಲಿ Vitamin D ಸಹ ಒಂದಾಗಿದೆ.
ಕರ್ನಾಟಕದ ಕ್ಷೀರ ಬ್ರಹ್ಮ ಎಂದೆ ಹೆಸರು ಗಳಿಸಿರುವ ಎಂ.ವಿ.ಕೃಷ್ಣಪ್ಪ ರವರು ದೇಶ ವಿದೇಶಗಳಲ್ಲಿ ಸುತ್ತಿ ಅಲ್ಲಿನ ಜನತೆ ಯಾವ ಉದ್ದಿಮೆಯಲ್ಲಿ ಮುಂದುವರೆಯುತ್ತಿದ್ದಾರೆ ಎಂದು ವೀಕ್ಷಿಸಿ ವಿದೇಶಗಳಿಂದ ಹೆಚ್ಚು ಹೆಚ್ಚು ಹಾಲು ಕರೆಯುವ ರಾಸುಗಳನ್ನು ತಂದು ಎರಡೂ ಜಿಲ್ಲೆಗಳಲ್ಲಿ ಕ್ಷೀರ ಕ್ರಾಂತಿಯನ್ನೆ ಸೃಷ್ಟಿಸುವ ಮೂಲಕ ಕೋಲಾರ ಹಾಗು ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸಹಕಾರಿಯಾಗಿದ್ದಾರೆ. ಇಂತಹ ಮಹಾ ಪುರುಷರ ಆದರ್ಶಗಳು ಮತ್ತು ವಿಚಾರದಾರಣೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ ಸಮಾಜದ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ನಡೆಸಲು ಹಾಲು ಸೇವನೆ ಮಾಡುವುದು ಬಹಳ ಮುಖ್ಯ ಮಕ್ಕಳಿಂದ ವೃದ್ದರವರಿಗೂ ಹಾಲು ಉತ್ಕೃಷ್ಠವಾದ ಪೌಷ್ಠಿಕ ಆಹಾರವಾಗಿದೆ ಎಂದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಮನೋಹರ್, ಕೋಚಿಮುಲ್ ಶಿಭಿರ ಘಟಕದ ಉಪವ್ಯವಸ್ಥಾಪಕ ರವಿಕಿರಣ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಎಂ.ಗೋಪಾಲ್, ಶಿಭಿರ ಘಟಕದ ಅಧಿಕಾರಿಗಳಾದ ಉಮೇಶ್‌ರೆಡ್ಡಿ, ಮಂಜುನಾಥ, ಶ್ರೀನಿವಾಸ್, ಜಯಚಂದ್ರ, ಮತ್ತಿತರರು ಹಾಜರಿದ್ದರು.