Sidlaghatta : ಹದಿನೆಂಟು ವರ್ಷ ವಯಸ್ಸು ತುಂಬಿ ವಾಹನ ಚಾಲನಾ ಪರವಾನಗಿ ಪಡೆಯದ ಹೊರತು ಯಾರು ಕೂಡ ಬೈಕ್ ಅಥವಾ ಯಾವುದೆ ರೀತಿಯ ವಾಹನವನ್ನು ಚಲಾಯಿಸುವುದು ತಪ್ಪು. ಇದರಿಂದ ನೀವಷ್ಟೆ ಅಲ್ಲ ವಾಹನ ಮಾಲೀಕರಿಗೂ ಸಂಕಷ್ಟ ಎದುರಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ತಿಳಿಸಿದರು.
ತಾಲ್ಲೂಕಿನ ಹನುಮಂತಪುರ ಗೇಟ್‌ನ ಬಿಜಿಎಸ್ ಕಾಲೇಜಿನಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿಯು ಎಲ್ಲ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ ಇರುತ್ತದೆ. ಕಾನೂನಿನ ಸವಲತ್ತುಗಳು ಅಗತ್ಯ ಇರುವ, ಆರ್ಥಿಕವಾಗಿ ಹಿಂದುಳಿದವರಿಗೆ, ಅನ್ಯಾಯಕ್ಕೆ ತುತ್ತಾದವರಿಗೆ ಇಲ್ಲಿ ಉಚಿತವಾಗಿ ಕಾನೂನಿನ ನೆರವು, ಸಲಹೆ ಸೂಚನೆಗಳು ಸಿಗಲಿವೆ ಎಂದರು.
ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈಗಿನಿಂದಲೆ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು, ಮುಂದಿನ ಬದುಕಿನಲ್ಲಿ ಕಾನೂನುಗಳನ್ನು ಉಲ್ಲಂಘನೆ ಮಾಡದೆ ಉತ್ತಮ ಬದುಕು ನಡೆಸಿದರೆ ಅದರಿಂದ ನಿಮಗೂ ನಿಮ್ಮನ್ನು ನಂಬಿದ ಕುಟುಂಬ ಹಾಗೂ ಸಮಾಜಕ್ಕೂ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ಬಾಲ ಕಾರ್ಮಿಕ ಕಾಯ್ದೆ, ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಗಾಗಿ ಮಾಡಿರುವ ಕಾನೂನುಗಳ ಬಗ್ಗೆ ಹಾಗೂ ಫೋಕ್ಸೋ ಕಾಯ್ದೆಯ ಕುರಿತಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು. ಪೌಷ್ಟಿಕಾಂಶವಿರುವ ಆಹಾರ ಸೇವಿಸಿ ಮನಸ್ಸು, ಬುದ್ದಿ ಮತ್ತು ದೇಹವನ್ನು ಆರೋಗ್ಯವಾಗಿಟ್ಟುಕೊಂಡು ಓದಿನ ಬಗ್ಗೆ ಗಮನಕೊಡುವಂತೆ ಮತ್ತು ಸರಳತೆಯನ್ನು ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೆ.ಪೊಜಾ ಮಾತನಾಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳು ತಮ್ಮ ಮೇಲೆ ಅಥವಾ ತಮ್ಮ ನೆರೆ ಹೊರೆಯಲ್ಲಿ ಆಗುವ ಅನ್ಯಾಯ, ಅಕ್ರಮ, ದೌರ್ಜನ್ಯಗಳನ್ನು ಪ್ರಶ್ನಿಸುವಂತಾಗಬೇಕು. ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದರು.
ಉಚಿತ ಕಾನೂನು ಸೇವಾ ಸಮಿತಿಯ ಕಾರ್ಯಗಳ ಬಗ್ಗೆ ನೀವು ತಿಳಿದುಕೊಂಡು ನಿಮ್ಮ ಪೋಷಕರಿಗೂ ಹಾಗೂ ಅಗತ್ಯ ಇರುವವರಿಗೂ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕೆಂದರು. ಕಾಲೇಜಿನ ಪ್ರಾಂಶುಪಾಲ ಕೆ.ಮಹದೇವ್, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್ ಹಾಜರಿದ್ದರು.