Sidlaghatta : ಶಿಡ್ಲಘಟ್ಟ ನಗರದ ಶ್ರೀ ಶಾರದಾ ವಿದ್ಯಾಸಂಸ್ಥೆಯಲ್ಲಿ ಶನಿವಾರ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಿದ್ದರು.
ರಕ್ತಪರೀಕ್ಷೆ, ಹಸಿರು ಮನೆ, ನೀರಿನ ಶುದ್ಧೀಕರಣ, ಮಾತನಾಡುವ ಗೊಂಬೆ, ಗಾಳಿಯಿಂದ ವಿದ್ಯುತ್ ತಯಾರಿಕೆ, ಜ್ವಾಲಾಮುಖಿ, ಆಹಾರ ಸರಪಣಿ, ದೇಹದ ವಿವಿಧ ಅಂಗಗಳ ರಚನೆಗಳು, ತ್ಯಾಜ್ಯ ನಿರ್ವಹಣೆ, ಭೂಮಿಯ ಪದರಗಳು, ಮಳೆ ಕೊಯ್ಲು, ಮಿದುಳು, ಪ್ರಾಣಿ, ಪಕ್ಷಿ, ಸಸ್ಯಗಳ ವೈವಿಧ್ಯ ಮುಂತಾದ ವೈಜ್ಞಾನಿಕ ಸಂಗತಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ, ಅವುಗಳನ್ನು ವಿವರಿಸಿದರು.
ಶ್ರೀ ಶಾರದಾ ವಿದ್ಯಾಸಂಸ್ಥೆಯ ಎಲ್.ಕೆ.ಜಿ ಯ ಪುಟಾಣಿ ಮಕ್ಕಳಿಂದ ಹತ್ತನೇ ತರಗತಿಯವರೆಗೆ ವಿದ್ಯಾರ್ಥಿಗಳು ತಮ್ಮ ಪಠ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಆಯ್ದುಕೊಂಡು ವಿಜ್ಞಾನ ವಸ್ತು ಪ್ರದರ್ಶನದಲ್ಲಿ 120 ಕ್ಕೂ ಹೆಚ್ಚಿನ ಮಾದರಿಗಳನ್ನು ಮಾಡಿದ್ದು, ಅವುಗಳ ಕುರಿತಾಗಿ ವಿವರಣೆ ನೀಡಿದರು.
ಶ್ರೀ ಶಾರದಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್ ಮಾತನಾಡಿ, ಶಾಲೆಗಳಲ್ಲಿ ಏರ್ಪಡಿಸುವ ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳ ಬುದ್ಧಿ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆ ಹೆಚ್ಚುತ್ತಿದ್ದು ಮಕ್ಕಳು ಇಂತಹ ವಸ್ತು ಪ್ರದರ್ಶನಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಮತ್ತು ಹೊಸ ವಿಚಾರಗಳನ್ನು ಕಲಿಯಲು ಸಹಕಾರಿಯಾಗುತ್ತದೆ ಎಂದರು.
ಶಾಲೆಯಲ್ಲಿ ಓದುವ ಮಕ್ಕಳು ಪುಸ್ತಕದ ಹುಳುವಾಗದೆ ಇತರೆ ವಿಷಯಗಳ ಬಗ್ಗೆ, ಪಠ್ಯೇತರ ಚಟುವಟಿಕೆ ಬಗ್ಗೆಯೂ ಹೆಚ್ಚಿನ ಆಸಕ್ತಿಯನ್ನು ವಹಿಸಬೇಕಾಗಿದೆ. ವಸ್ತು ಪ್ರದರ್ಶನದಲ್ಲಿ ಭಾಗ ವಹಿಸುವಾಗ ಮಕ್ಕಳು ಹಿಂಜರಿಕೆಯನ್ನು ಬಿಟ್ಟು ತಮಗೆ ಇಷ್ಟವಾದ ವಿಷಯಗಳ ಬಗ್ಗೆ ಮಾದರಿಯನ್ನು ಮಾಡಿಕೊಂಡು ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ ಎಂದರು.
ಪ್ರತಿ ವರ್ಷದಂತೆ ನಮ್ಮ ಶಾಲೆಯಲ್ಲಿ ವಿವಿಧ ವಿಷಯಗಳ ಬಗ್ಗೆ ವಸ್ತು ಪ್ರದರ್ಶನವನ್ನು ಎರ್ಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಶಾಲೆಯಲ್ಲಿ ಮಕ್ಕಳಿಗೆ ನುರಿತ ತಂತ್ರಜ್ಞರಿಂದ ಅರಿವನ್ನು ಮೂಡಿಸಲು ಯೋಜನೆ ರೂಪಿಸ ಲಾಗಿದೆ ಎಂದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಆರ್. ಮುನಿರತ್ನಂ, ಕಾರ್ಯದರ್ಶಿ ಎ.ಎಂ.ಶ್ರೀಕಾಂತ್, ಎ.ಆರ್.ಎಂ. ಪಿಯು ಕಾಲೇಜಿನ ಪ್ರಾಂಶುಪಾಲ ಮೂರ್ತಿ ಕೆ.ಸಾಮ್ರಾಟ್, ಮುಖ್ಯ ಶಿಕ್ಷಕರಾದ ಸಿದ್ಧರಾಜು, ರಾಜೇಶ್ ಹಾಗೂ ಶಿಕ್ಷಕರಾದ ನರಸಿಂಹ ಮೂರ್ತಿ, ಶಾಲಾ ಭೋದಕ ಹಾಗೂ ಬೋಧಕೇತರ ವರ್ಗ ಹಾಜರಿದ್ದರು.