Sidlaghatta : ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣವನ್ನು ನಮ್ಮ ದೇಶ ಮಾತ್ರವಲ್ಲ ಜಗತ್ತಿನ ಅನೇಕ ರಾಷ್ಟ್ರಗಳು ಒಪ್ಪಿವೆ. ಈ ಮಹಾಕಾವ್ಯ ಜಗತ್ತಿನಲ್ಲಿ ಇಂದಿಗೂ ಮಾನವೀಯತೆ, ಧರ್ಮ ಸಂಸ್ಕಾರ ನೆಲೆಸಲು ಕಾರಣವಾಗಿದೆ. ಮಹರ್ಷಿ ವಾಲ್ಮೀಕಿ ಅವರು ರಚಿಸಿದ ಶ್ರೀರಾಮಾಯಣವು ಸಾರ್ವಕಾಲಿಕವಾದುದು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಸಾಂಕೇತಿಕವಾಗಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ನಗರದ ಮಯೂರ ವೃತ್ತದಲ್ಲಿನ ಮಹರ್ಷಿ ವಾಲ್ಮೀಕಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ರತ್ನಾಕರನು ಸಾಧನೆಯ ಮೂಲಕ ಮಹರ್ಷಿ ವಾಲ್ಮೀಕಿಯಾಗಿ, ರಾಮನ ಕಥೆಯನ್ನು ರಾಮನಿಗೇ ಲವಕುಶರ ಮೂಲಕ ಕೇಳಿಸಿದ ಮಹಾತ್ಮ. ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಹಲವಾರು ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಿ ನಮಗೆ ಮಾರ್ಗದರ್ಶನ ಮಾಡಿದ್ದಾರೆ ಎಂದು ಹೇಳಿದರು.
ಈ ಜಗತ್ತಿನಲ್ಲಿ ಮನುಷ್ಯ ಕುಲ ಇರುವ ತನಕ ರಾಮಾಯಣ ಮಹಾಕಾವ್ಯದಲ್ಲಿನ ಎಲ್ಲ ಸಂದೇಶಗಳು ನಮ್ಮ ಬದುಕಿಗೆ ದಾರಿ ದೀಪವಾಗಲಿದೆ. ರಾಮರಾಜ್ಯ ಆಗಲಿ ಎಂಬುದು ಎಲ್ಲರ ಆಶಯವಾಗಿದ್ದು ಆ ರಾಮರಾಜ್ಯದ ಕಲ್ಪನೆ ಬಂದಿದ್ದು ರಾಮಾಯಣದಿಂದಲೆ ಎಂದರು.
ದೇವಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಕಳೆದೆರಡು ದಿನಗಳಿಂದ ಮಳೆ ಬೀಳುತ್ತಿದೆ. ಪ್ರಕೃತಿಯ ವರವಿದ್ದಾಗ ಮಾತ್ರ ರೈತರು ಚೆನ್ನಾಗಿರಲು ಸಾಧ್ಯ ಎಂದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾ.ಪಂ ಇಓ ಹೇಮಾವತಿ, ಸಮುದಾಯದ ಹಿರಿಯ ಮುಖಂಡರಾದ ಬಂಕ್ ಮುನಿಯಪ್ಪ, ಎನ್.ಮುನಿಯಪ್ಪ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ, ಸಮುದಾಯದ ಮುಗಿಲಡಿಪಿ ನಂಜಪ್ಪ, ದ್ಯಾವಪ್ಪ ಹಾಜರಿದ್ದರು.