Alasur, Sidlaghatta : ಮಕ್ಕಳ ದಿಶೆಯಿಂದಲೇ ತಂದೆ-ತಾಯಿ, ಪೋಷಕರು, ಗುರುಹಿರಿಯರನ್ನು ಗೌರವಿಸುವ ಹಾಗೂ ಸಹಕಾರ ತೋರುವ ಗುಣವನ್ನು ಬೆಳೆಸಬೇಕು. ಇದರಿಂದ ಮಕ್ಕಳಲ್ಲಿ ಜೀವನ ಮತ್ತು ನೈತಿಕ ಮೌಲ್ಯಗಳು ವೃದ್ಧಿಯಾಗಿ, ಉತ್ತಮ ವ್ಯಕ್ತಿತ್ವ ರೂಪಿಸುವ ಮೂಲಕ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಸಿ.ಆರ್.ಪಿ ಬಾಬು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಅಲಸೂರು ದಿನ್ನೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾತೃಪೂಜೆ ಮತ್ತು ಮಾತೃಭೋಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುಖ್ಯಶಿಕ್ಷಕ ಶಿವಕುಮಾರ್ ಮಾತನಾಡಿ, ತಾಯಂದಿರು ಮಕ್ಕಳಿಗೆ ಮೊದಲ ಗುರುವಾಗುತ್ತಾರೆ. ಜೀವನದ ಪಾಠವನ್ನು ತಾಯಂದಿರಿಂದಲೇ ಕಲಿಯುವ ಮಕ್ಕಳು, ತಮ್ಮಲ್ಲಿನ ದೈವಿಕತೆಯನ್ನು ಗುರುತಿಸುವ ಗುಣವನ್ನು ಬೆಳಸಿಕೊಳ್ಳಬೇಕು ಎಂದರು.
ಶಿಕ್ಷಕ ನರಸಿಂಹರಾಜು ಮಾತೃಪೂಜೆ ಮತ್ತು ಮಾತೃಭೋಜನವು ಕೇವಲ ತಾಯಂದಿರನ್ನು ಗೌರವಿಸುವ ಕಾರ್ಯಕ್ರಮವಾಗದೇ, ಶಾಲೆ ಮತ್ತು ಸಮಾಜದ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ. ಪೋಷಕರ ಸೇವೆ ಮತ್ತು ತ್ಯಾಗಗಳ ಮಹತ್ವವನ್ನು ಮಕ್ಕಳಿಗೆ ಅರಿವುಗೊಳಿಸುವ ಜೊತೆಗೆ ಪೋಷಕರು ಮತ್ತು ಮಕ್ಕಳ ನಡುವಿನ ಪ್ರೀತಿ, ಗೌರವವನ್ನು ಹೆಚ್ಚಿಸುತ್ತದೆ ಎಂದು ವಿವರಿಸಿದರು.
ಮಕ್ಕಳು ತಾಯಂದಿರಿಗೆ ಪೂಜೆ ಸಲ್ಲಿಸಿದ ನಂತರ ತಾಯಂದಿರೇ ಮಕ್ಕಳಿಗೆ ಕೈತುತ್ತು ಹಾಕಿ ತಿನ್ನಿಸಿದ್ದು, ಈ ಹೃದಯಸ್ಪರ್ಶಿ ಕ್ಷಣ ಎಲ್ಲರಿಗೂ ಸಂತಸ ತಂದಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸುರೇಶ್, ರಾಮಚಂದ್ರಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷರು, ಪದಾಧಿಕಾರಿಗಳು, ವಿದ್ಯಾರ್ಥಿಗಳ ಪೋಷಕರು ಹಾಗೂ ತಾಯಂದಿರೂ ಭಾಗವಹಿಸಿದ್ದರು.