Home Sidlaghatta ಘನ ತ್ಯಾಜ್ಯ ಘಟಕದಲ್ಲಿ ನಿರಂತರ ಬೆಂಕಿ: ಸ್ಥಳೀಯರ ಆಕ್ರೋಶ

ಘನ ತ್ಯಾಜ್ಯ ಘಟಕದಲ್ಲಿ ನಿರಂತರ ಬೆಂಕಿ: ಸ್ಥಳೀಯರ ಆಕ್ರೋಶ

0

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ರಸ್ತೆಯ ಹಿತ್ತಲಹಳ್ಳಿ ಗೇಟ್ ಸಮೀಪದ ನಗರಸಭೆಯ ಘನ ತ್ಯಾಜ್ಯ ಘಟಕದಲ್ಲಿ ಕಳೆದ ನಾಲ್ಕು ದಿನಗಳಿಂದ ಬೆಂಕಿ ಹೊತ್ತಿ ಉರಿಯುತ್ತಿದ್ದು, ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸತತವಾಗಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರೂ, ಅದನ್ನು ಸಂಪೂರ್ಣ ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ.

ಘಟಕದಲ್ಲಿ ಶೇಖರಣೆಯಾದ ತ್ಯಾಜ್ಯ ರಾಶಿಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಸುತ್ತಮುತ್ತಲಿಗೆ ದಟ್ಟ ಹೊಗೆ ಆವರಿಸಿದ್ದು, ಇದರಿಂದ ಬೇಸತ್ತ ಹಿತ್ತಲಹಳ್ಳಿ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ ನಗರಸಭೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಳವಣಿಗೆಯನ್ನು ಪರಿಶೀಲಿಸಲು ಬಂದ ಹೆಚ್ಚುವರಿ ಪ್ರಭಾರ ಪೌರಾಯುಕ್ತ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೋಹನ್, ಕಂದಾಯ ಅಧಿಕಾರಿಗಳಾದ ನಾಗರಾಜ್, ಕೃಷ್ಣಮೂರ್ತಿ, ರಾಜೇಶ್ ಮತ್ತು ಆಥಿಕ್ ಅವರನ್ನು ಸುತ್ತುವರೆದ ಗ್ರಾಮಸ್ಥರು, ಸಮಸ್ಯೆಯನ್ನು ವಿವರಿಸುತ್ತಾ, ಶಾಶ್ವತ ಪರಿಹಾರ ಕಲ್ಪಿಸದ ಕಾರಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

“ಸಮಸ್ಯೆಯನ್ನು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಯಾವುದೇ ಶಾಶ್ವತ ಪರಿಹಾರ ಕಂಡುಕೊಳ್ಳದೆ ಇಷ್ಟು ವರ್ಷಗಳು ಕಳೆದಿವೆ. ಈಗಾಗಲೇ ನಮ್ಮ ಆರೋಗ್ಯ ಹಾನಿಗೊಳಗಾಗಿದೆ, ಬೆಳೆಗಳು ಹಾಳಾಗಿವೆ. ಇನ್ನು ನಾವು ಎಷ್ಟು ದಿನ ಇದನ್ನು ಸಹಿಸಬೇಕು? ಇಲ್ಲಿಯ ತ್ಯಾಜ್ಯ ಘಟಕವನ್ನು ಬೇರೆಡೆ ಸ್ಥಳಾಂತರಿಸಿ, ಇಲ್ಲವೇ ನಮ್ಮ ಹಿತ್ತಲಹಳ್ಳಿ ಗ್ರಾಮವನ್ನೇ ಬೇರೆಡೆ ಸ್ಥಳಾಂತರಿಸಿ!” ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕೆಲಕಾಲ ಘಟಕದೊಳಗೆ ದಿಗ್ಬಂಧನ ಹಾಕಿ ನಿರೀಕ್ಷಿಸಿದ ಗ್ರಾಮಸ್ಥರು, ತಕ್ಷಣವೇ ಬೆಂಕಿ ನಂದಿಸುವುದರ ಜೊತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳುವಂತೆ ಎಚ್ಚರಿಸಿದರು. ಬೇಡಿಕೆ ಈಡೇರುವಂತೆ ಇಲ್ಲದಿದ್ದರೆ ಘಟಕಕ್ಕೆ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದರು.

“ಹದಿನೈದು ವರ್ಷಗಳ ಹಿಂದೆ ನಗರಸಭೆ ಆಡಳಿತ ಮಂಡಳಿಯವರು ಈ ಪ್ರದೇಶವನ್ನು ಶಾಂತಿವನವಾಗಿ ಅಭಿವೃದ್ಧಿಪಡಿಸಿ, ಗೋಕುಂಟೆ ಸುತ್ತ ಉದ್ಯಾನವನ ಬೆಳೆಸುವ ಯೋಜನೆ ರೂಪಿಸಿದ್ದರು. ಆದರೆ, ಅನಂತರ ಇಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗಿದ್ದು, ನಗರದಲ್ಲಿನ ಎಲ್ಲ ತ್ಯಾಜ್ಯವನ್ನು ಇಲ್ಲಿ ಸುರಿಯಲಾಗುತ್ತಿದೆ. ವರ್ಷಕ್ಕೆ ಮೂರು-ನಾಲ್ಕು ಬಾರಿ ತ್ಯಾಜ್ಯದ ಒತ್ತಡ ಹೆಚ್ಚಿ ಬೆಂಕಿ ಹೊತ್ತಿಕೊಳ್ಳುತ್ತದೆ. ಇದರಿಂದ ಹೊರಹೊಮ್ಮುವ ವಿಷಕಾರಿ ಹೊಗೆ ಸುತ್ತಮುತ್ತಲಿನ ರೇಷ್ಮೆ ಬೆಳೆಗೆ ಹಾನಿ ಉಂಟುಮಾಡುತ್ತದೆ, ಜನರ ಆರೋಗ್ಯ ಹದಗೆಡುತ್ತಿದೆ, ನೊಣಗಳ ಸಮಸ್ಯೆ ತೀವ್ರವಾಗಿದೆ. 150-200ಕ್ಕೂ ಹೆಚ್ಚು ನಾಯಿಗಳು ಇಲ್ಲಿ ನೆಲೆಸಿದ್ದು, ದಾರಿಹೋಕರು ಮತ್ತು ಸ್ಥಳೀಯರಿಗೆ ಅಪಾಯದ ಸೂಚನೆಯಾಗಿದೆ,” ಎಂದು ಪ್ರಗತಿಪರ ರೈತ ಹಿತ್ತಲಹಳ್ಳಿ ಎಚ್.ಜಿ. ಗೋಪಾಲಗೌಡ ಹೇಳಿದರು.

ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಿತ್ತಲಹಳ್ಳಿ ವೆಂಕಟೇಶ್, ಸದಸ್ಯ ನರಸಿಂಹಮೂರ್ತಿ, ಎಚ್.ಜಿ. ಗೋಪಾಲಗೌಡ, ಎಚ್.ಕೆ. ಸುರೇಶ್, ಎಂ.ಪಿ.ಸಿ.ಎಸ್. ಅಧ್ಯಕ್ಷ ಲೋಕೇಶ್, ಗೋಪಾಲಕೃಷ್ಣ, ಮುನಿರಾಜು, ಮುರಳಿ, ಮುನಿಕೃಷ್ಣ, ಮೋಹನ್ ಹಾಗೂ ಇತರ ಗ್ರಾಮದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version