
Sidlaghatta : ಗ್ರಾಮೀಣ ಬಡತನ ನಿರ್ಮೂಲನೆ ಮತ್ತು ಉದ್ಯೋಗ ಸೃಷ್ಟಿಯ ಉದ್ದೇಶದಿಂದ ರೂಪುಗೊಂಡ ನರೇಗಾ ಯೋಜನೆ, ಹಲವೆಡೆ ಸಮರ್ಪಕ ಅನುಷ್ಠಾನಕ್ಕೊಳಗಾಗದೆ ಕುಂಠಿತವಾಗಿದೆ. ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ನಡುವಿನ ಹೊಂದಾಣಿಕೆ ಕೊರತೆಯೇ ಈ ಸಮಸ್ಯೆಗೆ ಕಾರಣವಾಗಿದೆ ಎಂದು ಶಾಸಕ ಬಿ.ಎನ್. ರವಿಕುಮಾರ್ ಅಭಿಪ್ರಾಯಪಟ್ಟರು.
ಬುಧವಾರ, ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಗೇಟ್ ಬಳಿಯ ಇಂಡಿಯನ್ ಪ್ಯಾಲೇಸ್‌ನಲ್ಲಿ ನಡೆದ ನರೇಗಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳ ಒದಗಿಸುವುದು ಅತ್ಯಗತ್ಯ, ಜನರ ನಂಬಿಕೆಗೆ ತಕ್ಕಂತೆ ಆಯ್ಕೆಗೊಂಡ ಜನಪ್ರತಿನಿಧಿಗಳು ತಮ್ಮ ಅಧಿಕಾರವನ್ನು ಸಾರ್ಥಕಗೊಳಿಸಬೇಕು. ಅವರ ಅಧಿಕಾರ ಅವಧಿಯಲ್ಲಿ ಮಾಡಿಸಿದ ಅಭಿವೃದ್ಧಿ ಕಾಮಗಾರಿ ಭವಿಷ್ಯದಲ್ಲಿಯೂ ಉಳಿಯುವಂತಾಗಬೇಕು. ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪಲು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಶಿಡ್ಲಘಟ್ಟ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ತರಲು ತಾವು ಪ್ರಯತ್ನಿಸುತ್ತಿರುವುದನ್ನು ಶಾಸಕರು ಹೈಲೈಟ್ ಮಾಡಿದರು. “ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲಾ ಪದಾಧಿಕಾರಿಗಳು ಒಗ್ಗೂಡಿ ಶ್ರಮಿಸಿದರೆ, ನಮ್ಮ ಶಿಡ್ಲಘಟ್ಟ ಕ್ಷೇತ್ರವನ್ನು ಇತರರಿಗೂ ಮಾದರಿಯಾಗಿ ತೋರಿಸಬಹುದು” ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂಗವಾಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನರೇಗಾ ಯೋಜನೆಯ ವೈಯಕ್ತಿಕ ಫಲಾನುಭವಿಗಳನ್ನು ಸನ್ಮಾನಿಸಲಾಯಿತು. ಸ್ವ-ಸಹಾಯ ಸಂಘಗಳ ಸಹಯೋಗದಲ್ಲಿ ವಿವಿಧ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಕೂಡಾ ಏರ್ಪಡಿಸಲಾಗಿತ್ತು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತೀಕ್ ಪಾಷಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಕ್ ಮುನಿಯಪ್ಪ ಸೇರಿದಂತೆ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು, ನರೇಗಾ ಹಾಗೂ ಸ್ವ-ಸಹಾಯ ಸಂಘಗಳ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.