Sidlaghatta : ಶಿಡ್ಲಘಟ್ಟ ನಗರದ ಹೊರವಲಯದ ವರದನಾಯಕನಹಳ್ಳಿ ಬಳಿಯ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಸೋಮವಾರ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 83 ನೇ ಸಹಕಾರಿ ವರ್ಷದ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಪಿಎಲ್‌ಡಿ ಬ್ಯಾಂಕ್ (PLD Bank) ಅಧ್ಯಕ್ಷ ಸಿ.ಕೆ.ನಾರಾಯಣಸ್ವಾಮಿ ಮಾತನಾಡಿದರು.
ಸಹಕಾರ ಸಂಘಗಳಿಂದ ಪಡೆಯುವ ಸಾಲಗಳನ್ನು ಸಕಾಲದಲ್ಲಿ ಪಡೆದ ಸಾಲ ಮರುಪಾವತಿ ಮಾಡುವುದು (Loan Repayment) ರೈತರ ಕರ್ತವ್ಯ ಹಾಗೂ ಸಹಕಾರಿ ತತ್ವದಡಿಯಲ್ಲಿ ನಡೆಯುತ್ತಿರುವ ಈ ಬ್ಯಾಂಕುಗಳ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಸ್ಥಳೀಯ ಜನತೆಯ ಹೆಚ್ಚಿನ ಸಹಕಾರ ಅಗತ್ಯವಾಗಿದೆ. ರೈತರು ತಾವು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದಾಗ ಮಾತ್ರ ಬೇರೆ ರೈತರಿಗೆ ಹಣವನ್ನು ಸಾಲ ನೀಡಲು ಸಾಧ್ಯವಾಗುತ್ತದೆ. ರೈತರು ವಾಯಿದೆ ಒಳಗೆ ಕಂತುಗಳನ್ನು ಮರುಪಾವತಿ ಮಾಡಿ ಸರ್ಕಾರದಿಂದ ಬರಬಹುದಾದ ಬಡ್ಡಿ ರಿಯಾಯಿತಿಯ ಸದುಪಯೋಗ ಪಡಿಸಿಕೊಳ್ಳುವ ಜೊತೆಗೆ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಪಿಎಲ್‌ಡಿ ಬ್ಯಾಂಕ್‌ನ ಹಿರಿಯ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ರೈತರು ಸಾಲ ಮರುಪಾವತಿಸಲು ಸರ್ಕಾರದ ಗೊಂದಲದ ಹೇಳಿಕೆಗಳು ಕಾರಣವಾಗಿದೆ. ರೈತರು ಯಾವುದೇ ಗೊಂದಲದ ಹೇಳಿಕೆಗಳಿಗೆ ಕಿವಿಗೊಡದೇ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಹಕಾರ ಬ್ಯಾಂಕ್ ಗಳ ಉಳಿವಿಗೆ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ನಾರಾಯಣಪ್ಪ, ನಿರ್ದೇಶಕರಾದ ಡಿ.ವಿ.ವೆಂಕಟೇಶಪ್ಪ, ಎಂ.ಪಿ.ರವಿ, ಡಿ.ಸಿ.ರಾಮಚಂದ್ರ, ಎ.ಎಸ್.ಮಂಜುನಾಥ್, ಸಿ.ವಿ.ನಾರಾಯಣಸ್ವಾಮಿ, ಎಂ,ಮುರಳಿ. ಸಿ.ನಾರಾಯಣಸ್ವಾಮಿ, ಕೆ.ಎಂ.ಭೀಮೆಶ್, ಅನಸೂಯಮ್ಮ, ಸುನಂದಮ್ಮ, ಬ್ಯಾಂಕಿನ ವ್ಯವಸ್ಥಾಪಕ ಮುನಿಯಪ್ಪ, ಸಿಬ್ಬಂದಿ ಉಪಸ್ಥಿತರಿದ್ದರು.