Sidlaghatta : Covid-19 ಹಿನ್ನಲೆಯಲ್ಲಿ ಶಾಲಾ ಶುಲ್ಕ ಶೇ 70 ರಷ್ಟು ಮಾತ್ರ ತೆಗೆದುಕೊಳ್ಳುವಂತೆ ಶಾಲೆಗಳಿಗೆ ಸರ್ಕಾರ ಸೂಚನೆ ನೀಡಿದೆಯಾದರೂ ತಾಲ್ಲೂಕಿನ ಬಹುತೇಕ ಖಾಸಗಿ ಶಾಲೆಗಳು ಮಕ್ಕಳ ಪೋಷಕರಿಂದ ಶೇ 100 ರಷ್ಟು ಶುಲ್ಕ ವಸೂಲಿ ಮಾಡುತ್ತಿವೆ. ಕೂಡಲೇ ಇಲಾಖೆ ಇಂತಹ ಶಾಲೆಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪುಟ್ಟಣ್ಣಯ್ಯ ಬಣ) ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಒತ್ತಾಯಿಸಿದರು.
ಖಾಸಗಿ ಶಾಲೆಗಳು ಮಕ್ಕಳ ಪೋಷಕರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದು ಕೂಡಲೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳೊಂದಿಗೆ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಈ ಬಗ್ಗೆ ಜಿಲ್ಲಾ ಕೇಂದ್ರದಲ್ಲಿ ಈ ಹಿಂದೆ ಪ್ರತಿಭಟನೆ ನಡೆಸಿದಾಗ ಎಲ್ಲಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ನಡೆಸಿ ಈ ಬಗ್ಗೆ ಕ್ರಮ ಜರುಗಿಸುವ ಭರವಸೆಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ನೀಡಿದ್ದರು. ಆದರೆ ಈವರೆಗೂ ಯಾವುದೇ ಸಭೆ ನಡೆಸಿಲ್ಲ. ಕಳೆದ ಎರಡು ವರ್ಷಗಳಿಂದ ಕೊರೋನಾ ಹಿನ್ನಲೆಯಲ್ಲಿ ಶಾಲೆಗಳು ನಡೆದಿರುವುದೇ ಕಡಿಮೆ. ಇಂತಹ ಸಂದರ್ಭದಲ್ಲಿ ಸರ್ಕಾರ ಶೇ 70 ರಷ್ಟು ಶೂಲ್ಕವನ್ನು ತೆಗೆದುಕೊಳ್ಳುವಂತೆ ಸೂಚಿಸುವ ಜೊತೆಗೆ ಶುಲ್ಕ ಎಷ್ಟು ಎಂಬುದರ ಬಗ್ಗೆ ಶಾಲೆಯ ನೋಟೀಸ್ ಬೋರ್ಡ್ ನಲ್ಲಿ ಪ್ರಕಟಿಸಬೇಕು ಎಂದು ಸೂಚಿಸಿತ್ತು. ಆದರೆ ತಾಲ್ಲೂಕಿನ ಯಾವುದೇ ಖಾಸಗಿ ಶಾಲೆಗಳಲ್ಲಿಯೂ ನೋಟೀಸ್ ಬೋರ್ಡ್ ನಲ್ಲಿ ಶುಲ್ಕದ ವಿವರ ಪ್ರಕಟಿಸಿಲ್ಲ. ಬದಲಿಗೆ ಮಕ್ಕಳ ಪೋಷಕರಿಂದ ಶೇ 100 ರಷ್ಟು ಶುಲ್ಕ ವಸೂಲಿ ಮಾಡುತ್ತಿವೆ ಎಂದರು.
ಕೂಡಲೇ ಹೆಚ್ಚು ಶುಲ್ಕ ಪಡೆಯುತ್ತಿರುವ ಖಾಸಗಿ ಶಾಲೆಗಳ ವಿರುದ್ದ ಕ್ರಮ ಜರುಗಿಸುವುದೇ ಸೇರಿದಂತೆ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸವಲತ್ತುಗಳನ್ನು ಒದಗಿಸಲು ಇಲಾಖೆಯ ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಚೇರಿಯ ಮುಂಭಾಗ ಸಂಘಟನೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಕ್ಷೇತ್ರ ಶೀಕ್ಷಣಾಧಿಕಾರಿ ಕಚೇರಿಯ ಸಿಬ್ಬಂದಿ ಸುಧಾಮಣಿ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಬಿ.ಎಂ.ಸೊಣ್ಣೇಗೌಡ, ಕೋಟೆ ಚನ್ನೇಗೌಡ, ಎನ್.ನಾಗರಾಜ, ಸಿ.ಬಿ.ಶ್ರೀನಿವಾಸ, ಡಿ.ಸಿರಮೇಶ್, ಶಂಕರ ಹಾಜರಿದ್ದರು.