Sidlaghatta : ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಶಿಡ್ಲಘಟ್ಟ ತಾಲ್ಲೂಕಿನ ಹಲವಾರು ಕೆರೆಗಳು ತುಂಬಿ ತುಳುಕಿವೆ. ನಾಲ್ಕು ಕೆರೆಗಳ ಕಟ್ಟೆಗಳು ಒಡೆದಿದ್ದು, ಕೆರೆಯ ನೀರು ಕೆರೆ ಅಚ್ಚು ಕಟ್ಟಿನ ಹೊಲ ಗದ್ದೆ ಜಮೀನು, ಊರುಗಳಿಗೆ ನುಗ್ಗಿದ್ದರಿಂದ ಅಪಾರ ನಷ್ಟವಾಗಿದೆ.
ಹೊಲ ಗದ್ದೆಗಳಲ್ಲಿ ಬೆಳೆದು ನಿಂತ ಬೆಳೆ, ಕೆರೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ರಸ್ತೆಗಳು ಹಾಳಾಗಿದ್ದು ಸಂಚಾರಕ್ಕೆ ಬಾರದಂತಾಗಿವೆ. ಗೋಣಿ ಮರದಹಳ್ಳಿಯ ಕೆರೆ ಕಟ್ಟೆ ಹೊಡೆದು ಹೋಗುವ ಭೀತಿ ಎದುರಾಗಿದೆ. ಈ ಕೆರೆಗಳ ಅಚ್ಚುಕಟ್ಟುದಾರರು ಆತಂಕಕ್ಕೆ ಒಳಗಾಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಉತ್ತರ ಭಾಗದಲ್ಲಿ ಬೆಟ್ಟಗುಡ್ಡಗಳಿದ್ದು, ಬೆಟ್ಟ ಗುಡ್ಡಗಳಂಚಿನ ಮಳೆ ನೀರು ಕೆರೆಗಳಗೆ ಹರಿದು ಕೆರೆಗಳು ಬಹುತೇಕ ಭರ್ತಿಯಾಗಿವೆ. ತುಂಬಿ ತುಳುಕತೊಡಗಿವೆ.
ತಿಮ್ಮನಾಯಕನಹಳ್ಳಿಯ ನಲ್ಲೋಜನಹಳ್ಳಿಯ ಅಗ್ರಹಾರ ಕೆರೆ, ಗಂಜಿಗುಂಟೆಯ ಚೊಕ್ಕನಹಳ್ಳಿ ಕೆರೆ, ಚಿಕ್ಕಬಂದರಘಟ್ಟ ಕೆರೆ, ಪಾಪತಿಮ್ಮನಹಳ್ಳಿ ಕೆರೆಗಳ ಕಟ್ಟೆಯೊಡೆದು ಅಪಾರ ನೀರು ನುಗ್ಗಿದ್ದು ಲಕ್ಷಾಂತರ ಮೌಲ್ಯದ ಬೆಳೆಗಳು ನಾಶವಾಗಿವೆ. ರೈತರು ಕಂಗಾಲಾಗಿದ್ದಾರೆ. ಆನೆಮಡಗು ಕೆರೆ ಕಟ್ಟೆಯಲ್ಲಿ ತೂತು ಕಾಣಿಸಿಕೊಂಡಿದ್ದು ಬಿರುಕು ಬಿಡುವ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.
ಜಿಲ್ಲಾ ಪಂಚಾಯಿತಿ ಸಿಇಒ ಶಿವಶಂಕರ್, ತಹಶೀಲ್ದಾರ್ ರಾಜೀವ್, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಕೀರ್ತಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಟ್ಟೆಗಳು ಹೊಡೆದು ಹೋಗಿರುವ ಪ್ರದೇಶದಲ್ಲಿ ತಗ್ಗು ಪ್ರದೇಶದಲ್ಲಿರುವ ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಿದ್ದಾರೆ.
ಅಗತ್ಯ ಬಿದ್ದರೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರಿಗೆ ಅಭಯ ನೀಡಿ ಧೈರ್ಯ ತುಂಬಿದ್ದಾರೆ.