Sidlaghatta : ಶಿಡ್ಲಘಟ್ಟ ನಗರದ ರೇಷ್ಮೆಗೂಡು ಮಾರುಕಟ್ಟೆಗೆ (Government Silk Cocoon Market) ಆವಕವಾಗುತ್ತಿರುವ ರೇಷ್ಮೆಗೂಡಿನ ಪ್ರಮಾಣ ದಿನೆ ದಿನೆ ಕುಸಿಯುತ್ತಿದೆ. ಇದೆ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ಗೂಡು ಮಾರುಕಟ್ಟೆಯನ್ನು ಮುಚ್ಚಬೇಕಾಗುತ್ತದೆ ಎಂದು ರೇಷ್ಮೆಗೂಡು ಮಾರುಕಟ್ಟೆಯ ಉಪ ನಿರ್ದೇಶಕ ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದರು.
Silk and Milk City ಶಿಡ್ಲಘಟ್ಟದಲ್ಲಿನ ರೇಷ್ಮೆಗೂಡು ಮಾರುಕಟ್ಟೆ ದೇಶದಲ್ಲೆ ಅತಿ ಹೆಚ್ಚು ರೇಷ್ಮೆಗೂಡು ವಹಿವಾಟು ನಡೆಯುವ ಮಾರುಕಟ್ಟೆ ಎಂಬ ಖ್ಯಾತಿ ಪಡೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಮಾರುಕಟ್ಟೆಗೆ ಆವಕವಾಗುತ್ತಿರುವ ರೇಷ್ಮೆಗೂಡಿನ ಪ್ರಮಾಣ ತೀವ್ರವಾಗಿ ಕುಸಿದಿದೆ.
ಒಂದು ಕಾಲದಲ್ಲಿ 1500 ಲಾಟುಗಳು ಅಂದರೆ ಸುಮಾರು 75 ಸಾವಿರ ಕೆಜಿಯಷ್ಟು ರೇಷ್ಮೆಗೂಡು ಬರುತ್ತಿದ್ದ ಇಲ್ಲಿನ ಮಾರುಕಟ್ಟೆಗೆ ಇದೀಗ 300 Lotಗಳು ಬಂದರೆ ಹೆಚ್ಚು ಎನ್ನುವಂತ ಪರಿಸ್ಥಿತಿ ಬಂದಿದೆ.
ಖಾಸಗಿ ರೇಷ್ಮೆಗೂಡು ಮಂಡಿಗಳು ಆರಂಭವಾಗಿರುವುದು, ಕೆಲ ರೈತರು ನೇರವಾಗಿ ರೀಲರುಗಳ ಮನೆಗೆ ಗೂಡನ್ನು ಕೊಂಡೊಯ್ದು ಮಾರಾಟ ಮಾಡುವುದು ಸೇರಿದಂತೆ ಹಲವು ಕಾರಣಗಳಿಂದ ಮಾರುಕಟ್ಟೆಯಲ್ಲಿ ವಹಿವಾಟು ದಿನ ದಿನಕ್ಕೂ ಕುಸಿಯುತ್ತಿದೆ.
ಈ ಹಿನ್ನಲೆಯಲ್ಲಿ ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ರೇಷ್ಮೆ ಬೆಳೆಗಾರರು, ರೀಲರುಗಳು ಹಾಗೂ ರೇಷ್ಮೆ ಮಾರುಕಟ್ಟೆ, ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಭೆ ಸೇರಿ ರೇಷ್ಮೆಗೂಡು ಮಾರುಕಟ್ಟೆಗೆ ವಹಿವಾಟಿಗೆ ಬರುವ ಗೂಡಿನ ಪ್ರಮಾಣ ಹೆಚ್ಚಿಸಿ ರೀಲರುಗಳು ಹಾಗೂ ರೈತರನ್ನು ಉಳಿಸುವ ಬಗ್ಗೆ ಚರ್ಚಿಸಲಾಯಿತು.
ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ಮಾರ್ಗದ ಜಾತವಾರ ಬಳಿ ಈಗಾಗಲೆ ಖಾಸಗಿ ರೇಷ್ಮೆ ಮಂಡಿ ಆರಂಭವಾಗಿದ್ದು ಶಿಡ್ಲಘಟ್ಟದಲ್ಲಿ ಮತ್ತೊಂದು ಅಂತಹ ಖಾಸಗಿ ರೇಷ್ಮೆ ಮಂಡಿ ಆರಂಭಿಸಲು ಸಿದ್ದತೆಗಳು ನಡೆದಿದೆ. ಅದನ್ನು ಕೂಡಲೆ ಸ್ಥಗಿತಗೊಳಿಸಲು ಕಾನೂನು ಬದ್ದವಾಗಿ ಕ್ರಮ ತೆಗೆದುಕೊಳ್ಳಬೇಕು.
ಮಾರುಕಟ್ಟೆಯ ಹೊರಗೆ ಗೂಡು ಖರೀದಿಸಿ ತೂಕ ಹಾಕುವ ಯಂತ್ರಗಳನ್ನು ಅಲ್ಲಿಂದ ಹೊರ ಹಾಕಬೇಕು. ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ರೈತರೂ ಸಹ ಹತ್ತು ಇಪ್ಪತ್ತು ರೂಗಳಿಗೆ ಆಸೆ ಬಿದ್ದು ಖಾಸಗಿ ರೇಷ್ಮೆ ಮಂಡಿಗೆ ಗೂಡು ಹಾಕುವುದನ್ನು ಬಿಡಬೇಕು. ರೀಲರುಗಳ ಮನೆಗೆ ಹೋಗಿ ಗೂಡನ್ನು ಮಾರಾಟ ಮಾಡುವ ಪರಿಪಾಠವನ್ನು ಬಿಡಬೇಕೆಂಬ ಸಲಹೆ ಸೂಚನೆಗಳು ಸಭೆಯಲ್ಲಿ ವ್ಯಕ್ತವಾದವು.
ರೇಷ್ಮೆಗೂಡು ಮಾರುಕಟ್ಟೆ ಉಪ ನಿರ್ದೇಶಕ ಶ್ರೀನಿವಾಸ್, ರೈತ ಸಂಘದ ಮುಖಂಡರಾದ ಭಕ್ತರಹಳ್ಳಿ ಬೈರೇಗೌಡ, ನಾರಾಯಣಸ್ವಾಮಿ, ಗೋಪಾಲಗೌಡ, ಸುರೇಶ್, ರೀಲರುಗಳಾದ ಅನ್ಸರ್‌ಖಾನ್, ರಾಮಕೃಷ್ಣ, ಆನಂದ್ ಭಾಗವಹಿಸಿದ್ದರು.