Home Sidlaghatta ಶಿಡ್ಲಘಟ್ಟದಲ್ಲಿ ನಡೆದ ವಿಜೃಂಭಣೆಯ ಶ್ರೀರಾಮ ಶೋಭಾಯಾತ್ರೆ

ಶಿಡ್ಲಘಟ್ಟದಲ್ಲಿ ನಡೆದ ವಿಜೃಂಭಣೆಯ ಶ್ರೀರಾಮ ಶೋಭಾಯಾತ್ರೆ

0

Sidlaghatta : ರೇಷ್ಮೆನಗರ ಶಿಡ್ಲಘಟ್ಟದಲ್ಲಿ ಶ್ರೀರಾಮ ಶೋಭಾಯಾತ್ರೆಯು ಸಡಗರ ಸಂಭ್ರಮದಿಂದ ಭಕ್ತಪೂರ್ವಕವಾಗಿ ನಡೆಯಿತು. ಹನುಮಂತಪುರ ಗೇಟ್‌ ನ ಆಂಜನೇಯಸ್ವಾಮಿ ಗುಡಿಯಿಂದ ಸಾರಿಗೆ ಬಸ್ ನಿಲ್ದಾಣದವರೆಗೂ ಸಾಗಿದ ಶ್ರೀರಾಮಶೋಭಾಯಾತ್ರೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸಹಸ್ರಾರು ಮಂದಿ ಭಕ್ತರು ಕಣ್ತುಂಬಿಕೊಂಡರು.

ಶಿಡ್ಲಘಟ್ಟ-ದಿಬ್ಬೂರಹಳ್ಳಿ ರಸ್ತೆಯ ಹನುಮಂತಪುರ ಗೇಟ್‌ ನಲ್ಲಿ ಶ್ರೀಆಂಜನೇಯಸ್ವಾಮಿ ಗುಡಿಯಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಅವರು ಪೂಜೆ ಸಲ್ಲಿಸುವ ಮೂಲಕ ಶ್ರೀರಾಮ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಹನ್ನೆರಡು ಅಡಿ ಎತ್ತರದ ಶ್ರೀಕೋದಂಡರಾಮನ ಮೂರ್ತಿ, ಒಂದು ಅಡಿ ಎತ್ತರದ ಶ್ರೀಬಾಲರಾಮನ ವಿಗ್ರಹ ಕುರುಕ್ಷೇತ್ರ ರಥ, ಹನುಮ ವೇಷಧಾರಿಗಳೊಂದಿಗೆ ಕೇರಳದ ಚಂಡೆ, ಸ್ಥಳೀಯ ನೆಲಸೊಗಡಿನ ತಮಟೆ ಇನ್ನಿತರೆ ಕಲಾ ತಂಡಗಳೊಂದಿಗೆ ಶೋಭಾಯಾತ್ರೆಯು ಸಾಗಿತು.

ನೆರೆದಿದ್ದವರ ಕೈಯಲ್ಲಿ ಭಗವಧ್ವಜಗಳು ಹಾರಾಡಿದವು, ಜೈ ಶ್ರೀರಾಮ್ ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು. ಶ್ರೀಕೋದಂಡರಾಮ, ಬಾಲರಾಮ, ಕುರುಕ್ಷೇತ್ರ ರಥ ಹನುಮನ ಮೂರ್ತಿಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಹಾಕಿದರು.

ಶೋಭಾಯಾತ್ರೆಯು ಹನುಮಂತಪುರ ಗೇಟ್‌ ನಿಂದ ಪ್ರವಾಸಿ ಮಂದಿರ ರಸ್ತೆ ಮೂಲಕ ಕೆಂಪಣ್ಣ ವೃತ್ತ, ಕೋಟೆ ವೃತ್ತದಲ್ಲಿ ಸಾಗಿ ಅಲ್ಲಿಂದ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದವರೆಗೂ ಸಾಗಿತು.

ಮಾರ್ಗದ ಉದ್ದಕ್ಕೂ ನೂರಾರು ಮಂದಿ ನಿಂತು ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು. ಅಲ್ಲಲ್ಲಿ ಮಜ್ಜಿಗೆ, ನೀರಿನ ಹಾಗೂ ತಂಪು ಪಾನೀಯವನ್ನು ಸಾರ್ವಜನಿಕರು, ಸಂಘ ಸಂಸ್ಥೆಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಿ ದಣಿದವರಿಗೆ ವಿತರಿಸಿದರು.

ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ಮಾಜಿ ಶಾಸಕ ಎಂ.ರಾಜಣ್ಣ, ಭಜರಂಗ ದಳದ ತಾಲ್ಲೂಕು ಸಂಯೋಜಕ ಬಿ.ವೆಂಕಟೇಶ್ ಸೇರಿದಂತೆ ಭಜರಂಗದಳ, ಹಿಂದೂಪರಿಷತ್, ನಾನಾ ಸಂಘಟನೆಗಳ ಕಾರ್ಯಕರ್ತರು, ಶ್ರೀರಾಮನ ಭಕ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.

ವೇದಿಕೆ ಕಾರ್ಯಕ್ರಮ

ನಮ್ಮ ಹಿರಿಯರು ಕಂಡಿದ್ದ 500 ವರ್ಷಗಳ ಕನಸು ಇದೀಗ ನನಸಾಗಿದೆ. ಅಯೋಧ್ಯೆ ಶ್ರೀರಾಮ ಮಂದಿರವು ನಮ್ಮ ಹಿಂದೂಗಳ ಸ್ವಾಭಿಮಾನದ ದೇವಾಲಯವಾಗಿದೆ. ನಾವೆಲ್ಲ ಅಯೋಧ್ಯೆಯ ರಾಮ ಮಂದಿರವನ್ನು ನೋಡುತ್ತಿರುವುದು ನಮ್ಮ ಪುಣ್ಯ ಜನ್ಮದ ಫಲವಾಗಿದೆ ಎಂದು ಯುವ ಹಿಂದೂ ವಾಗ್ಮಿ ಹಾರಿಕ ಮಂಜುನಾಥ್ ತಿಳಿಸಿದರು.

ಭಜರಂಗದಳ, ಹಿಂದೂ ಪರಿಷತ್‌ನ ಆಶ್ರಯದಲ್ಲಿ ನಗರದ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಬಳಿ ನಡೆದ ಶ್ರೀರಾಮ ಶೋಭಾಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರ ಪ್ರತಿಯೊಂದು ತತ್ವಗಳನ್ನು ಯುವ ಸಮಾಜ ಪಾಲನೆ ಮಾಡಬೇಕು. ಸಂಘಟನೆಯ ಮೂಲಕ ಮಾತ್ರ ಕಲಿಯುಗದಲ್ಲಿ ನಾವೆಲ್ಲವನ್ನು ಮೆಟ್ಟಿನಿಲ್ಲಬೇಕಿದೆ. ನಾವೆಲ್ಲರು ಜಾತಿಗಳನ್ನು ಮರೆತು ಹಿಂದೂ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕಿದೆ.
ಜಾತಿಗಳು ನಿಮ್ಮ ದೇವರ ಮನೆಗೆ ಮಾತ್ರ ಸೀಮಿತವಾಗಿ ಮಾಡಿ ಪ್ರತಿಯೊಬ್ಬ ಹಿಂದು ಕೂಡ ಸಂಘಟನೆಗಳಲ್ಲಿ ಭಾಗಿಯಾಗಬೇಕಿದೆ. ಸಮಾಜಕ್ಕೆ ರಕ್ಷಣೆ ನೀಡುವ ಆರಕ್ಷಕರಿಗೆ ರಕ್ಷಣೆ ಸಿಗದ ಸ್ಥಿತಿ ನಿರ್ಮಾಣವಾಗುತ್ತಿದೆ. ನಾವೆಲ್ಲರು ನಮ್ಮ ಜಾತಿ ಪ್ರೇಮಕ್ಕಿಂತ ಧರ್ಮ ರಕ್ಷಣೆ ಮುಂದಾಗಬೇಕು.

ಹೆಣ್ಣು ಮಕ್ಕಳು ಮತ್ತು ಗೋ ರಕ್ಷಣೆ ಮಾಡಬೇಕು. ಪ್ರತಿಯೊಬ್ಬರು ಜಾಗೃತರಾಗಬೇಕು. ಭಾರತದ ಪ್ರತಿಯೊಂದು ಮನೆಯನ್ನು ಅಯೋಧ್ಯೆಯನ್ನಾಗಿ ಮಾಡಬೇಕಿದೆ. ಮೂರನೇ ಭಾರಿಗೆ ಮೋದಿ ಪ್ರಧಾನಿಯಾಗುತ್ತದೆ ಎಂದು ಹಲವಾರು ದಾರ್ಶನಿಕರು ನುಡಿದಿದ್ದರು. ಇದೀಗ ಅದು ನನಸಾಗಿದೆ. ರಾಮರಾಜ್ಯ ನಿರ್ಮಾಣವಾಗುತ್ತಿದೆ. ಕರ್ನಾಟಕದ ಅಂಜನಾದ್ರಿ ಬೆಟ್ಟದಿಂದ ಹುಟ್ಟಿಬಂದ ಹನುಮಂತ ಸಹ ವಾನರ ಸಂಘಟನೆಯ ಮೂಲಕ ಒಗ್ಗಟ್ಟಿನ ಭಾವನೆಯನ್ನು ಕಲಿಸಿಕೊಟ್ಟಿದ್ದಾರೆ. ಭಾರತವು ಹಿಂದುಗಳ ದೇಶವಾಗಿದೆ.

ಇಂತಹ ದೇಶದ ಸಜ್ಜಿಗಾಗಿ ನಾವೆಲ್ಲ ಶ್ರಮ ವಹಿಸಬೇಕಿದೆ. ಹೊಸ ನಾಡನ್ನು ಕಟ್ಟಿ ಧರ್ಮ ರಕ್ಷಣೆಗೆ ನಾಂದಿ ಹಾಕಬೇಕಿದೆ. ದೇಶದ ರಕ್ಷಣೆಯ ಜಾಗೃತಿಗಾಗಿ ನಮ್ಮ ಕೈಲಾದಷ್ಟು ಸೇವೆಯನ್ನು ಮಾಡಬೇಕು. ಇದು ನಮ್ಮ ಧರ್ಮದ ಉಳಿವಿಗಾಗಿ ನಾವು ಕೊಡುವ ಅತಿ ದೊಡ್ಡ ಕೊಡುಗೆ ಎಂದರು.

ಭಜರಂಗ ದಳದ ತಾಲ್ಲೂಕು ಸಂಚಾಲಕ ಬಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಮಳ್ಳೂರಿನ ಸ್ವಾಮಿ ವಿವೇಕಾನಂದ ಮಠದ ಶ್ರೀಪೂರ್ಣಾನಂದಸ್ವಾಮಿ, ಭಜರಂಗ ದಳದ ಜಿಲ್ಲಾಧ್ಯಕ್ಷ ನರೇಶ್‌ರೆಡ್ಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಂಬರೀಷ್ ವೇದಿಕೆಯಲ್ಲಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version