Sidlaghatta : ಜೂನ್ 9 ರಂದು ಶ್ರೀರಾಮ ಶೋಭಾಯಾತ್ರೆಯನ್ನು ವಿಜೃಂಭಣೆಯಿಂದ, ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುವುದು ಎಂದು ಭಜರಂಗದಳದ ತಾಲ್ಲೂಕು ಸಂಯೋಜಕ ವೆಂಕಟೇಶ್ ತಿಳಿಸಿದರು.
ನಗರದ ಕೋಟೆ ವೃತ್ತದ ಶ್ರೀರಾಮ ದೇವಸ್ಥಾನದ ಆವರಣದಲ್ಲಿ ಬುಧವಾರ ಶ್ರೀರಾಮ ಶೋಭಾಯಾತ್ರೆಯ ಕರಪತ್ರವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ನಗರದ ಹೊರವಲಯದ ದಿಬ್ಬೂರಹಳ್ಳಿ ರಸ್ತೆಯಲ್ಲಿ ಹನುಮಂತಪುರ ಗೇಟ್ ಬಳಿ ಇರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಿಂದ ಜೂನ್ 9 ರಂದು ಬೆಳಗ್ಗೆ 11 ಗಂಟೆಗೆ ಶೋಭಾಯಾತ್ರೆ ಪ್ರಾರಂಭವಾಗಲಿದೆ. ಎಲ್ಲರೂ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಶ್ರೀರಾಮಚಂದ್ರರ ಕೃಪೆಗೆ ಪಾತ್ರವಾಗಬೇಕೆಂದು ಕೋರಿದರು.
ಶ್ರೀರಾಮ ಶೋಭಾಯಾತ್ರೆಯ ದಿನದಂದು ಎಲ್ಲಾ ಹಿಂದೂ ಬಾಂಧವರ ಮನೆಯ ಮುಂದೆ ರಂಗೋಲಿ ಹಾಗೂ ಹೂವಿನಿಂದ ಅಲಂಕೃತವಾಗಿರಲಿ. ಮನೆಗೆ ಹಸಿರು ತೋರಣ ಕಟ್ಟಿ, ಭಗವಧ್ವಜ ಕಟ್ಟಿ, ಹಬ್ಬದ ವಾತಾವರಣ ಸೃಷ್ಟಿಯಾಗಲಿ ಎಂದು ಮನವಿ ಮಾಡಿದರು.
ಜೂನ್ 9 ರ ಸಂಜೆ ಐದು ಗಂಟೆಗೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ವೇದಿಕೆ ಕಾರ್ಯಕ್ರಮವಿರುತ್ತದೆ. ಪ್ರಸಿದ್ಧ ಹಿಂದೂ ಪರ ವಾಗ್ಮಿ ಹಾರಿಕ ಮಂಜುನಾಥ್ ಅವರು ಆಗಮಿಸಿ ತಮ್ಮ ವಾಗ್ಜರಿಯನ್ನು ಹರಿಸಲಿದ್ದಾರೆ. ಶ್ರೀರಾಮ ಶೋಭಾಯಾತ್ರೆಯ ಕರಪತ್ರಗಳನ್ನು ಮನೆಮನೆಗೂ ತಲುಪಿಸಲಾಗುವುದು. ಅನೇಕ ಹಳ್ಳಿಗಳಿಂದ ಸ್ವಯಂಪ್ರೇರಿತರಾಗಿ ಪಲ್ಲಕ್ಕಿಗಳನ್ನು ತಂದು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಭಜರಂಗದಳದ ಸಂಯೋಜಕ ಅಂಬರೀಷ್, ತಾಲ್ಲೂಕು ಸಂಯೋಜಕ ವೆಂಕಟೇಶ್, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.