Sidlaghatta : ಕಳೆದ ಬಾರಿ ತಾಲ್ಲೂಕಿನ ಕೆಲ ಮತಗಟ್ಟೆಗಳಲ್ಲಿ ಕಡಿಮೆ ಮತದಾನ ಹಿನ್ನಲೆ ಅಂತಹ ಮತಗಟ್ಟೆಗಳಲ್ಲಿ ಹಾಗೂ ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮಂಗಳವಾರ ತಾಲ್ಲೂಕು SVEEP ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಗನಹಳ್ಳಿ ಹಾಗೂ ಮೇಲೂರಿನಲ್ಲಿ ಸಹಾಯಕ ಚುನಾವಣಾಧಿಕಾರಿ ಜಾವಿದಾ ನಸೀಮಾ ಖಾನಂ ಮತ್ತು DYSP ಮುರಳೀಧರ್ ನೇತೃತ್ವದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಜಾವಿದಾ ನಸೀಮಾ ಖಾನಂ ಮಾತನಾಡಿ, ಮತದಾನ ಹೆಚ್ಚಳಕ್ಕೆ ಚುನಾವಣೆ ಆಯೋಗ ಮುಂದಾಗಿದ್ದು, ಅಧಿಕಾರಿಗಳಿಗೆ ತರಬೇತಿ ನೀಡುವ ಮೂಲಕ ಈ ಬಾರಿ ಪ್ರಜಾಪ್ರಭುತ್ವ ಹಬ್ಬವನ್ನು ಯಾವುದೇ ಅಹಿತಕರ ಘಟನೆಗಳು ಆಗದಂತೆ ಮುಂಜಾಗ್ರತೆಯ ಕ್ರಮ ವಹಿಸಿದೆ. ಪ್ರತಿ ಮತ ಅಮೂಲ್ಯ. ತಾವು ಮತ ಹಾಕುವುದಲ್ಲದೆ ತಮ್ಮ ಸುತ್ತಮುತ್ತಲಿನವರಿಗೆ, ಬಂಧುಗಳಿಗೆ ಮತ್ತು ಸ್ನೇಹಿತರಿಗೆ ಈ ಬಗ್ಗೆ ತಿಳಿ ಹೇಳಬೇಕು. ಯಾವುದೇ ಒತ್ತಡಕ್ಕೆ ಆಮಿಷಗಳಿಗೆ ಬಲಿಯಾಗಬಾರದು ಎಂದು ಹೇಳಿದರು.
DYSP ಮುರಳೀಧರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರು ಮುಂದಿ ಐದು ವರ್ಷಗಳು ಹೇಗಿರಬೇಕೆಂದು ನಿರ್ಧರಿಸುವ ಪ್ರಮುಖ ಜವಾಬ್ದಾರಿಯನ್ನು ಮತದಾನದ ಮೂಲಕ ನಿರ್ವಹಿಸುವರು. ಯಾವುದೇ ರೀತಿಯ ತೊಂದರೆ, ಅಡಚಣೆ ಉಂಟಾದರೂ ಪೊಲೀಸರನ್ನು ಸಂಪರ್ಕಿಸಿ ಎಂದು ಹೇಳಿದರು.
ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾ.ಪಂ ಇಒ ಜಿ.ಮುನಿರಾಜ ಮಾತನಾಡಿ, ಚುನಾವಣೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ ಮತದಾನ ಮಾಡುವ ಮೂಲಕ ಮತ್ತಷ್ಟು ಗಟ್ಟಿಗೊಳಿಸಬೇಕೆಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ವೆಂಕಟೇಶ್, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ, ನಗರಸಭೆ ಪೌರಾಯುಕ್ತ ರಘುನಾಥ್ ಹಾಜರಿದ್ದರು.