Sidlaghatta : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದಿಂದ Congress ಟಿಕೇಟ್ ಕೈ ತಪ್ಪಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಪುಟ್ಟು ಆಂಜಿನಪ್ಪ (Anjinappa Puttu) ಅವರು ತಮ್ಮ ಬೆಂಬಲಿಗರೊಂದಿಗೆ ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಗೊಂಡರು.
KPCC ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪಕ್ಷದ ಬಾವುಟವನ್ನು ನೀಡಿ ಶಾಲು ಹೊದಿಸಿ ಪುಟ್ಟು ಆಂಜಿನಪ್ಪ ಅವರನ್ನು ಹಾಗೂ ಅವರ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಂಡರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಿಡ್ಲಘಟ್ಟದ ಯುವ ನಾಯಕ ಪುಟ್ಟು ಆಂಜಿನಪ್ಪ, ಚಿಕ್ಕಬಳ್ಳಾಪುರದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಹಾಗೂ ಅವರ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಂಡಿದ್ದೇವೆ ಎಂದರು.
ನಮ್ಮಲ್ಲಿ ಹೊಸದಾಗಿ ಪಕ್ಷಕ್ಕೆ ಸೇರಿದವರು, ಹಳೆಯ ಕಾರ್ಯಕರ್ತರು ಎನ್ನುವ ತಾರತಮ್ಯ ಇಲ್ಲದೆ ಎಲ್ಲರನ್ನೂ ಸಮಾನವಾಗಿ ನಮ್ಮ ಪಕ್ಷ ಕಾಣುತ್ತದೆ, ನಿಮ್ಮ ಸ್ಥಾನ ಮಾನಕ್ಕೆ ಚ್ಯುತಿ ಬಾರದಂತೆ ನಮ್ಮ ಕಾಂಗ್ರೆಸ್ ಪಕ್ಷ ನಿಮ್ಮನ್ನು ಹಾಗೂ ನಿಮ್ಮ ಬೆಂಬಲಿಗರನ್ನು ನಡೆಸಿಕೊಳ್ಳುತ್ತದೆ ಎಂದು ಭರವಸೆ ನೀಡಿದರು.
ಪಕ್ಷದಲ್ಲಿನ ಎಲ್ಲ ಹಿರಿಯರು ಕಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜತೆಗೂಡಿ ಪಕ್ಷದಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷದ ತತ್ವ ಸಿದ್ದಾಂತವನ್ನು ಮೈಗೂಡಿಸಿಕೊಳ್ಳಬೇಕು, ನಮ್ಮೆಲ್ಲರ ಪಾಲಿಗೂ ದೇವಸ್ಥಾನವಾಗಿರುವ ಕಾಂಗ್ರೆಸ್ ಕಚೇರಿಗೆ ಕಾಲಿಟ್ಟಿರುವ ನೀವೆಲ್ಲರೂ ಇನ್ನು ಮುಂದೆ ನಮ್ಮವರೆ ಆಗಿದ್ದೀರಿ ಎಂದು ತಿಳಿಸಿದರು.
ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಶಿಡ್ಲಘಟ್ಟದಲ್ಲಿ ಮಾಜಿ ಸಚಿವ ವಿ.ಮುನಿಯಪ್ಪ ಅವರು ಕಾಂಗ್ರೆಸ್ ಪಕ್ಷವನ್ನು ಕಳೆದ 40 ವರ್ಷಗಳಿಂದ ಬಲಿಷ್ಠವಾಗಿ ಕಟ್ಟಿ ಸುಭದ್ರ ಕೋಟೆಯನ್ನು ನಿರ್ಮಿಸಿದ್ದಾರೆ. ಅವರು ನಮಗೂ ನಿಮಗೂ ಹಿರಿಯರಿದ್ದಾರೆ. ಅವರ ನಾಯಕತ್ವದಲ್ಲಿ ಎಲ್ಲರೂ ಪಕ್ಷವನ್ನು ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.
ಈ ವೇಳೆ ಪುಟ್ಟು ಆಂಜಿನಪ್ಪ ಅವರಿಗೆ ಕಾಂಗ್ರೆಸ್ ಪಕ್ಷದ ಬಾವುಟ ನೀಡಿ ಶಾಲು ಹೊದಿಸಿ ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್, ರಾಜ್ಯ ಸಭಾ ಸದಸ್ಯ ಚಂದ್ರಶೇಖರ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ಗುಪ್ತ ಹಾಜರಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೇಟ್ ತಪ್ಪಿ ಸ್ವತಂತ್ರವಾಗಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ರಾಜೀವ್‌ಗೌಡ ಅವರ ಸೋಲಿಗೆ ಕಾರಣವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಪಟ್ಟ ಕಟ್ಟಿಕೊಂಡು ಪಕ್ಷದಿಂದ ಉಚ್ಚಾಟನೆಯಾಗಿದ್ದ ಪುಟ್ಟು ಆಂಜಿನಪ್ಪ ಅವರನ್ನು ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುವುದನ್ನು ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ ಮತ್ತವರ ಬೆಂಬಲಿಗರು ತೀವ್ರ ವಿರೋಧಿಸಿದ್ದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಡಾ.ಎಂ.ಸಿ.ಸುಧಾಕರ್, ಬೈರತಿ ಸುರೇಶ್ ಅವರಿಗೆ ಶಿಡ್ಲಘಟ್ಟದಲ್ಲಿ ಪಕ್ಷದ ಸ್ಥಿತಿಗತಿಯನ್ನು ವಿವರಿಸಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪುಟ್ಟು ಆಂಜಿನಪ್ಪ ಮಾಡಿದ ಪಕ್ಷ ವಿರೋಧಿ ಚಟುವಟಿಕೆಗಳನ್ನು ವಿವರಿಸಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದಂತೆ ಒತ್ತಾಯಿಸಿದ್ದರು.