Sidlaghatta : ಕ್ರೀಡೆ ಕೇವಲ ಮನರಂಜನೆಯ ಪ್ರತೀಕವಲ್ಲ ಬದಲಿಗೆ ಸಾಧನೆಯ ಪ್ರತಿರೂಪವಾಗಿದೆ. ಚಿಕ್ಕಂದಿನಿಂದಲೇ ಶಿಸ್ತುಬದ್ಧವಾಗಿ ಕ್ರೀಡೆಗಳಲ್ಲಿ ಭಾಗವಹಿಸಿಕೊಂಡು ಬಂದರೆ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳಾಗಬಹುದು ಎಂದು ಕಸಾಪ ಮಾಜಿ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಹೇಳಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವತಿಯಿಂದ ಹಮ್ಮಿಕೊಂಡಿದ್ದ 2023-24ನೇ ಸಾಲಿನ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯಾವುದೇ ಸಾಧನೆಗೆ ಪರಿಶ್ರಮ ಅತಿ ಮುಖ್ಯ. ಸತತ ಪರಿಶ್ರಮದಿಂದ ತಮ್ಮ ಆಸಕ್ತಿ ಕ್ಷೇತ್ರ ಅಥವಾ ಕ್ರೀಡೆಯಲ್ಲಿ ಸಾಧನೆ ಮಾಡಬಹುದು. ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟುಗಳಿದ್ದಾರೆ. ಅವರಿಗೆ ಪ್ರೋತ್ಸಾಹ ಹಾಗೂ ತರಬೇತಿಯ ಅಗತ್ಯತೆಯಿದ್ದು ಆಗಾಗ್ಗೆ ತರಬೇತಿ ಶಿಬಿರಗಳನ್ನು ನಡೆಸುವ ಮೂಲಕ ಜಿಲ್ಲಾ ಮತ್ತು ರಾಜ್ಯಮಟ್ಟಕ್ಕೆ ಪ್ರತಿನಿಧಿಸುವಂತೆ ಮಾಡಬೇಕು ಎಂದರು.
ನಗರಸಭೆ ಮಾಜಿ ಸದಸ್ಯ ಜೆ.ವಿ.ಸುರೇಶ್ ಮಾತನಾಡಿ ಹಿಂದಿನ ಕಾಲದಲ್ಲಿ ಶ್ರಮಾಧಾರಿತ ಜೀವನಶೈಲಿ ಇತ್ತು. ಇದರಿಂದ ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ತರಗತಿಯ ಪಾಠಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕ್ರೀಡೆಗಳಿಗೆ ಮನ್ನಣೆ ನೀಡದಂತಹ ಮನಸ್ಥಿತಿಯಿಂದ ನಾವೆಲ್ಲರೂ ಹೊರಬರಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಸಾವಿರ ವಿದ್ಯಾರ್ಥಿಗಳಲ್ಲಿ ಮೂವರು ಉತ್ತಮ ಕ್ರೀಡಾಪಟುಗಳನ್ನು ಹುಡುಕುವುದೇ ಕಷ್ಟಕರವಾಗಿದೆ. ಕಠಿಣ ಪರಿಶ್ಮದಿಂದ ಮಾತ್ರ ಕ್ರೀಡೆಯಲ್ಲಿ ಗೆಲುವು ಸಾಧ್ಯ ಎಂದರು.
ಅಥ್ಲೆಟಿಕ್ಸ್, ವಾಲಿಬಾಲ್, ಖೋಖೋ, ಕಬಡ್ಡಿ, ಫುಟ್‌ಬಾಲ್, ಥ್ರೋಬಾಲ್, ಸ್ಪರ್ಧೆಗಳನ್ನು ನಡೆಸಲಾಯಿತು.
ದೈಹಿಕ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ವಿ.ಪ್ರಕಾಶ್‌ಬಾಬು, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ದೇವೇಂದ್ರ.ವೈ.ಆರ್, ರಾಷ್ಟ್ರೀಯ ಕ್ರೀಡಾಪಟು ಜಯಂತಿಗ್ರಾಮ ನಾರಾಯಣಸ್ವಾಮಿ, ಕ್ರೀಡಾಂಗಣ ಸಿಬ್ಬಂದಿ ಶ್ರೀನಿವಾಸ್ ಹಾಜರಿದ್ದರು.