Sidlaghatta : ಶಿಡ್ಲಘಟ್ಟ ನಗರದ ಶ್ರೀವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ನವರಾತ್ರಿ ಆಚರಣೆಯ ಕಡೆಯ 9 ನೇ ದಿನ ಶನಿವಾರ ಸಂಜೆ ದೇವಾಲಯದ ಆವರಣದಲ್ಲಿ ಶಮೀ ವೃಕ್ಷ ಪೂಜೆಯನ್ನು ನೆರವೇರಿಸಲಾಯಿತು.
ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಲೋಕ ಕಲ್ಯಾಣಾರ್ಥವಾಗಿ ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಶಮೀ ವೃಕ್ಷ ಪೂಜೆಯನ್ನು ವೇಣುಗೋಪಾಲಸ್ವಾಮಿ ದೇವಾಲಯದ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳು, ಭಕ್ತರು ನೆರವೇರಿಸಿದರು.
ವೇದ ಬ್ರಹ್ಮ ದಾಶರಥಿ ಭಟ್ಟಾಚಾರ್ಯ ಅವರು ಶಮೀ ವೃಕ್ಷ ಪೂಜೆಯ ಮಹತ್ವವನ್ನು ವಿವರಿಸುತ್ತಾ, ಶಮೀ ವೃಕ್ಷ ಅಥವಾ ಬನ್ನಿ ವೃಕ್ಷವನ್ನು ಪೂಜಿಸುವುದರಿಂದ ನಮ್ಮ ಶತೃಗಳು ಮತ್ತು ನಮ್ಮ ಪಾಪದ ಕರ್ಮಗಳು ನಾಶವಾಗುತ್ತವೆ ಎನ್ನುವ ನಂಬಿಕೆಯಿದೆ ಎಂದರು.
ಔಷಧೀಯ ಗುಣವುಳ್ಳ ಶಮೀ ವೃಕ್ಷಕ್ಕೆ ಬಹು ದೊಡ್ಡ ಇತಿಹಾಸ ಪರಂಪರೆಯ ಸ್ಥಾನವಿದೆ. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಅರ್ಜುನನ ಚಾಣಕ್ಷತನದಿಂದ ಕೌರವರ ವಿರುದ್ದ ವಿಜಯ ಸಾಧಿಸಿದ ದಿನವೇ ವಿಜಯ ದಶಮಿ ಆಗಿದೆ.
ಕೌರವರ ಕಣ್ಣಿಗೆ ಕಾಣದಂತೆ ಅರ್ಜುನನು ಯುದ್ದದ ಅಸ್ತ್ರಗಳನ್ನು ಶಮೀ ವೃಕ್ಷದಲ್ಲಿ ಅಡಗಿಸಿಟ್ಟದ್ದನಂತೆ. ಶಮೀ ವೃಕ್ಷದ ಮಹಿಮೆಯಿಂದ ಕೌರವರಿಗೆ ಅರ್ಜುನನ ಯುದ್ದಾಸ್ತ್ರಗಳು ಗಿಡ ಮರದ ಕೊಂಬೆ ರೆಂಬೆಗಳಂತೆ ಕಾಣುತ್ತಿದ್ದವಂತೆ. ಈ ಮೂಲಕ ಕೌರವರಿಂದ ಅರ್ಜುನನು ಯುದ್ದಾಸ್ತ್ರಗಳನ್ನು ಶಮೀ ವೃಕ್ಷದ ಮೂಲಕ ಉಳಿಸಿಕೊಂಡಿದ್ದ ಎನ್ನುವ ಪ್ರತೀತಿ ಇದೆ ಎಂದರು.
ಹೀಗೆ ಶಮೀ ವೃಕ್ಷವನ್ನು ಪೂಜಿಸುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ನಮ್ಮ ಪರಂಪರೆಯಲ್ಲಿದ್ದು ವಿಜಯ ದಶಮಿಯ ದಿನ ಪೂಜಿಸಲಾಗುತ್ತದೆ ಎಂದು ಶಮೀ ವೃಕ್ಷ ಪೂಜೆಯ ಮಹತ್ವವನ್ನು ವಿವರಿಸಿದರು.
ಶ್ರೀವೇಣುಗೋಪಾಲಸ್ವಾಮಿ ದೇವಾಲಯದ ಸೇವಾ ಮತ್ತು ಅಭಿವೃದ್ದಿ ಟ್ರಸ್ಟ್ ನ ಸಂಚಾಲಕ ರೂಪಸಿ ರಮೇಶ್ ದಂಪತಿ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬಾಣವನ್ನು ಬಿಡುವ ಮೂಲಕ ಸಂಪ್ರದಾಯದಂತೆ ಶಮೀ ವೃಕ್ಷ ಪೂಜೆಯನ್ನು ನೆರವೇರಿಸಿದರು. ನೆರೆದಿದ್ದ ಭಕ್ತರು ಶಮೀ ವೃಕ್ಷದ ಎಲೆಗಳನ್ನು ಕಿತ್ತು ಭಕ್ತಿ ಭಾವದಿಂದ ಮನೆಗೆ ಕೊಂಡೊಯ್ದರು. ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ವೇದ ಬ್ರಹ್ಮ ನಾರಾಯಣ ದಾಶರಥಿ ಭಟ್ಟಾಚಾರ್ಯ, ವೇದ ಪಂಡಿತ ಕಾಕರ್ಲ ಸುಬ್ರಮಣ್ಯ ಶಾಸ್ತ್ರೀಗಳು ಪೂಜೆಯನ್ನು ನೆರವೇರಿಸಿದರು. ದೇವಾಲಯದ ಸೇವಾ ಮತ್ತು ಅಭಿವೃದ್ದಿ ಟ್ರಸ್ಟ್ ನ ಅಧ್ಯಕ್ಷ ಬಳೆ ರಘು, ಕಾರ್ಯದರ್ಶಿ ಎಲ್.ಮಧುಸೂಧನ್, ಮುನಿರಾಜು, ಚಿಕ್ಕ ಮುನಿಯಪ್ಪ, ವಾರ್ತಾ ಇಲಾಖೆಯ ನಿವೃತ್ತ ಅಧಿಕಾರಿ ಕೃಷ್ಣಪ್ಪ ಸೇರಿದಂತೆ ವೇಣುಗೋಪಾಲಸ್ವಾಮಿ ದೇವಾಲಯದ ಭಕ್ತರು ಹಾಜರಿದ್ದರು.