Sidlaghatta : ಸುಪ್ರೀಂ ಕೋರ್ಟ್ ನ ತೀರ್ಪಿನಂತೆ ಪರಿಶಿಷ್ಟ ಜಾತಿ ಪಂಗಡಗಳ ಜನ ಸಂಖ್ಯಾ ಆಧಾರದಲ್ಲಿ ಒಳ ಮೀಸಲಾತಿಯನ್ನು ಕೂಡಲೆ ಜಾರಿ ಮಾಡಬೇಕೆಂದು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯ ಮುಖಂಡ ಎನ್.ಎ.ವೆಂಕಟೇಶ್ ಅವರು ಸರ್ಕಾರವನ್ನು ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಪಂಗಡದಲ್ಲಿ ಜನ ಸಂಖ್ಯೆ ಆಧಾರದಲ್ಲಿ ಒಳ ಮೀಸಲಾತಿ ಜಾರಿ ಮಾಡಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಾ ಕಾಲತಳ್ಳುತ್ತಿತ್ತು. ಆದರೆ ಇದೀಗ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿಯು ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರ ಎಂದು ತೀರ್ಪು ನೀಡಿದ್ದನ್ನು ಅವರು ಸ್ವಾಗತಿಸಿದರು.
ಹಾಗಾಗಿ ರಾಜ್ಯ ಸರ್ಕಾರಗಳು ಒಳ ಮೀಸಲಾತಿಯನ್ನು ಅನಿವಾರ್ಯವಾಗಿ ಮಾಡಲೇಬೇಕಾಗಿದೆ. ಈಗಲಾದರೂ ವಿಳಂಬ ಮಾಡದೆ ಜನ ಸಂಖ್ಯೆಯ ಆಧಾರದಲ್ಲಿ ಒಳ ಮೀಸಲಾತಿಯನ್ನು ಕೂಡಲೆ ಜಾರಿ ಮಾಡಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಆಗ್ರಹಿಸಿದರು.
ಸುಪ್ರೀಂ ಕೋರ್ಟ್ ನ ತೀರ್ಪಿನಂತೆ ರಾಜ್ಯದಲ್ಲೂ ಒಳ ಮೀಸಲಾತಿಯನ್ನು ಜಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕಲಿ ಅಕ್ಟೋಬರ್ 16 ರ ಬುಧವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಅಂತೆಯೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ಮುಖ್ಯ ಮಂತ್ರಿ, ರಾಜ್ಯ ಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಸೇರಿ ಒಳ ಮೀಸಲಾತಿಗಾಗಿ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಲಾಗುವುದು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಜಾರಿ ಮಾಡುವ ವಿಚಾರದಲ್ಲಿ ಇಚ್ಚಾಶಕ್ತಿ ಹೊಂದಿದ್ದು ಈ ಸಂಬಂಧ ಅಕ್ಟೋಬರ್ 18 ರಂದು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಒಳ ಮೀಸಲಾತಿ ಜಾರಿ ಮಾಡಿಯೆ ತೀರುತ್ತಾರೆ ಎನ್ನುವ ಆಶಾ ಭಾವನೆ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿಯ ಮುಖಂಡರಾದ ತಾತಹಳ್ಳಿ ಚಲಪತಿ, ನಾಗನರಸಿಂಹ, ಜೀವಿಕ ಮುನಿಯಪ್ಪ, ಟಿ.ಎಂ.ಮುನಿಯಪ್ಪ, ಗೊರಲಪ್ಪ, ಎಂ.ಗುರುಮೂರ್ತಿ, ಕದಿರಪ್ಪ, ದೇವಪ್ಪ, ವೆಂಕಟೇಶ್, ಮಧುಕುಮಾರ್ ಹಾಜರಿದ್ದರು.