Sidlaghatta : ರೇಷ್ಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಮಲ ಇಕ್ಬಾಲ್ ಅವರು ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರ ರೇಷ್ಮೆ ಹುಳು ಸಾಕಾಣಿಕೆ ಮನೆ, ಹಿಪ್ಪುನೇರಳೆ ತೋಟಕ್ಕೆ ಭೇಟಿ ನೀಡಿ ರೇಷ್ಮೆ ಬೆಳೆಗಾರರೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ರೇಷ್ಮೆ ಬೆಳೆಗಾರರ ಸಮಸ್ಯೆಗಳ ಕುರಿತಾಗಿ ಮಾತನಾಡಿದ ರೈತ ಎಚ್.ಜಿ.ಗೋಪಾಲಗೌಡ, ಹಿಪ್ಪುನೇರಳೆ ಗಿಡಕ್ಕೆ ನುಸಿ ರೋಗ ಬಂದಿದ್ದು ಶೇ 50 ರಷ್ಟು ರೇಶ್ಮೆ ಬೆಳೆಗಾರರು ಇದರಿಂದ ನಷ್ಟವನ್ನು ಅನುಭವಿಸುತ್ತಿದ್ದಾರ. ಇದಕ್ಕೆ ವಿಜ್ಞಾನಿಗಳು ಸೂಕ್ತ ಔಷಧಿ ಮತ್ತು ತಾಂತ್ರಿಕೆ ನೆರವನ್ನು ನೀಡಬೇಕಿದೆ ಎಂದು ಹೇಳಿದರು.
ರೇಷ್ಮೆ ಬೆಳೆಗಾರರಿಗೆ ರಿಯಾಯಿತಿ ದರದಲ್ಲಿ ಸೊಪ್ಪು ಕಟಾವು ಯಂತ್ರವನ್ನು ಕೊಡಿಸಬೇಕು. ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೀಲರುಗಳು ಕನಿಷ್ಠ 400 ರೂಗಳಿಗಿಂದ ಕಡಿಮೆ ಬೀಟ್ ಕೂಗಬಾರದು. ಹರಾಜಾದ ರೇಷ್ಮೆ ಗೂಡನ್ನು ಮಧ್ಯಾಹ್ನ ಎರಡು ಗಂಟೆಯ ಒಳಗೆ ತೂಕ ಹಾಕಬೇಕು. ರೈತರು ಸಂಕಷ್ಟದಲ್ಲಿರುವುದರಿಂದ ಹರಾಜಾರ ಒಂದು ಕೇಜಿ ಗೂಡಿಗೆ ನೂರು ರೂ ಸರ್ಕಾರ ನೀಡಬೇಕು. ಈ ಕ್ರಮಗಳನ್ನು ಕೈಗೊಂಡಲ್ಲಿ ರೇಷ್ಮೆ ಮಾರುಕಟ್ಟೆ ಬಿಟ್ಟು ಹೊರಗಡೆ ರೈತರು ಗೂಡನ್ನು ಮಾರಾಟ ಮಾಡುವುದಿಲ್ಲ ಎಂದು ವಿವರಿಸಿದರು.
ಈ ಸಲಹೆಗಳು ಉತ್ತಮವಾಗಿವೆ. ಅವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ರೇಷ್ಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಮಲ ಇಕ್ಬಾಲ್ ತಿಳಿಸಿದರು.
ರೇಷ್ಮೆ ಇಲಾಖೆಯ ಹೆಚ್ಚುವರಿ ಆಯುಕ್ತ ಬಿ.ಆರ್.ನಾಗಭೂಷಣ್, ಜಂಟಿ ನಿರ್ದೇಶಕ ವೈ.ಟಿ.ತಿಮ್ಮಯ್ಯ,, ಮಾರುಕಟ್ಟೆ ಡಿಡಿ ಮಹದೇವಯ್ಯ, ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ಚಂದ್ರಪ್ಪ, ಹಿತ್ತಲಹಳ್ಳಿ ಸುರೇಶ್, ಆಶಾ, ಪುಟ್ಟೇಗೌಡ ಹಾಜರಿದ್ದರು.