Chikkaballapur: ಚಿಕ್ಕಬಳ್ಳಾಪುರ ತಾಲ್ಲೂಕಿನ ಕಳವಾರ ಗ್ರಾಮದ ( Kalavara Village ) ಸಮೀಪವಿರುವ ಸ್ಕಂದಗಿರಿ ಬೆಟ್ಟ ( Skandagiri Hills, Karnataka ) ಕವಿಯಾಗುವ ಅದಮ್ಯ ಉತ್ಕಟತೆ ಮತ್ತು ಎತ್ತರದ ಮೋಡ ಬಾಚಿ ತಬ್ಬಿಕೊಳ್ಳುವ ಉಮೇದಿನಲ್ಲಿ ಇರುವವರಿಗೆ ಹೇಳಿ ಮಾಡಿಸಿದ ತಾಣ.
ಪ್ರಸಿದ್ಧ ನಂದಿ ಗಿರಿಧಾಮದ ( Nandi Hills, Karnataka ) ಬದಿಯಲ್ಲಿರುವ ಸ್ಕಂದಗಿರಿ ಈಗಲೂ ಎಲೆಮರೆಕಾಯಿಯಂತೆ ಇದೆ. ದೀಪದ ಬುಡ್ಡೆ ಕೆಳಗಡೆ ಕತ್ತಲು ಎಂಬಂತೆ ನಂದಿ ಗಿರಿಧಾಮದ ದಟ್ಟ ಪ್ರಭಾವದಿಂದ ಅದು ಹೆಚ್ಚು ಬೆಳಕಿಗೆ ಬಂದಿಲ್ಲ. ಇದೆಲ್ಲವನ್ನೂ ಬದಿಗಿರಿಸಿ ಬೆಟ್ಟವನ್ನೇರಿದರೆ, ಇದಕ್ಕಿಂತ ಸುಂದರ ಜಾಗ ಇನ್ನೊಂದಿಲ್ಲ ಎಂಬ ಭಾವವೆ ಮೂಡದೇ ಇರುವುದಿಲ್ಲ. ಕಡಿದಾದ ದಾರಿಯಲ್ಲಿರುವ ಬಂಡೆಗಲ್ಲುಗಳನ್ನು ದಾಟಿ ಹತ್ತುವಾಗಿನ ಪ್ರಯಾಸ ಬೆಟ್ಟದ ತುದಿ ತಲುಪಿದಾಗ ಕೆಲವೇ ಕ್ಷಣಗಳಲ್ಲಿ ಕಾಣೆಯಾಗುತ್ತದೆ.
ಬೆಟ್ಟದ ತುತ್ತುದಿಗೆ ಅದರಲ್ಲೂ ಮುಂಜಾವಿನ 5 ರಿಂದ 7ರವೆಗಿನ ಅವಧಿಯಲ್ಲಿ ತಲುಪಿದರೆ, ಕಲ್ಪನೆಗಳ ಮೆರವಣಿಗೆ ಆರಂಭವಾಗುತ್ತದೆ. ಬೆಳ್ಳಿಮೋಡಗಳು ಇಡೀ ಬೆಟ್ಟವನ್ನು ಅಪಹರಿಸಿ ಕಾಣದ ಜಗತ್ತಿಗೆ ಹೊತ್ತೊಯ್ಯುತ್ತವೆ ಎಂಬ ಕಳವಳ ಒಂದೆಡೆ, ಮತ್ತೊಂದೆಡೆ ದೇವಾನುದೇವತೆಗಳ ಪುಷ್ಪಕ ವಿಮಾನದ ರೀತಿಯಲ್ಲಿ ಚಲಿಸುತ್ತೇವೆ ಎಂಬ ಖುಷಿ. ಸೂರ್ಯ ತಾನು ಉದಯಿಸುವ ವೇಳೆ ಆಕಾಶದ ಬಣ್ಣಗಳನ್ನು ಅದೆಷ್ಟು ಬಾರಿ ಬದಲಿಸುವುನೋ, ನಿರೀಕ್ಷೆ ವ್ಯಾಪ್ತಿಗೂ ನಿಲುಕುವುದಿಲ್ಲ.
ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸಮುದ್ರ ಮಟ್ಟದಿಂದ ಸುಮಾರು ೧೫೩೦ ಮೀಟರ್ ಎತ್ತರದಲ್ಲಿರುವ ಸ್ಕಂದಗಿರಿಗೆ ಈಗಲೂ ಅಚ್ಚುಕಟ್ಟಾದ ರಸ್ತೆಯಿಲ್ಲ. ಇಂತಹುದೊಂದು ವಿಶಿಷ್ಟ ಸ್ಥಳ ಇದೆ ಎಂಬುದಕ್ಕೆ ಯಾವುದೇ ನಾಮಫಲಕ ಅಥವಾ ಸೂಚನಾಫಲಕವೂ ಅಲ್ಲಿಲ್ಲ.
ಕಳವಾರ ಗ್ರಾಮದ ಪಾಪಾಘ್ನಿ ಮಠದ ಹಿಂಬದಿಯಿಂದ ನಡಿಗೆ ಪ್ರಯಾಣ ಆರಂಭಿಸಿದರೆ, ಬೆಟ್ಟದ ತುದಿ ತಲುಪಲು ಕನಿಷ್ಠ 2 ಗಂಟೆ ಬೇಕು. ಕಾಲುದಾರಿಯುದ್ದಕ್ಕೂ ಎರಡೂ ಬದಿಗಳಲ್ಲಿ ಗಿಡಗಂಟಿಗಳಿದ್ದು, ಅಲ್ಲಲ್ಲಿ ಸಿಗುವ ಬೃಹತ್ ಬಂಡೆಗಲ್ಲುಗಳ ಮೇಲೆ ವಿರಮಿಸಬಹುದು.
ಚೆಂದನೆಯ ಸೂರ್ಯೋದಯ ನೋಡಬೇಕೆಂದೇ ಬಹುತೇಕ ಮಂದಿ ಮಧ್ಯರಾತ್ರಿ ೩ರ ಸುಮಾರಿಗೆ ಬೆಟ್ಟವನ್ನೇರಲು ಆರಂಭಿಸುತ್ತಾರೆ. ಇನ್ನೂ ಕೆಲವರು ರಾತ್ರಿ ೮ರಿಂದ ಕಾರ್ಯಾಚರಣೆ ಆರಂಭಿಸುತ್ತಾರೆ. ನೀರು, ತಂಪು ಪಾನೀಯ ಮತ್ತು ಕೊಂಚ ತಿಂಡಿ ತಿನಿಸು ಒಯ್ಯುವ ಅವರು ಬೆಟ್ಟದ ತುದಿ ತಲುಪಿದಾಗ ಅವುಗಳನ್ನು ಸವಿಯುತ್ತಾರೆ. ಅಸ್ಪಷ್ಟ ಕಾಲುದಾರಿ ಇರುವ ಕಾರಣ ಟಾರ್ಚ್ ಹಿಡಿದು ನಡೆದರೂ ದಾರಿ ತಪ್ಪಿ ಕಾಡಿಗೆ ನುಸುಳುವ ಸಾಧ್ಯತೆಯೇ ಹೆಚ್ಚಿರುತ್ತದೆ.
ಇಂತಹ ಅವಘಡ ಜರುಗುತ್ತವೆಯೆಂದು ನಾವು ಯಾರನ್ನೂ ಮಧ್ಯರಾತ್ರಿ ವೇಳೆ ಬೆಟ್ಟವನ್ನೇರಲು ಅವಕಾಶ ನೀಡುತ್ತಿಲ್ಲ. ಬೆಟ್ಟದ ಬಳಿ ಕಾವಲಿರುವ ಅರಣ್ಯ ಸಿಬ್ಬಂದಿ ಯಾರನ್ನೂ ಬೆಟ್ಟದ ಸುತ್ತಮುತ್ತ ಸುಳಿಯಲೂ ಸಹ ಬಿಡುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
– ರಾಹುಲ ಬೆಳಗಲಿ (ಚಿತ್ರ: ಡಿ.ಜಿ.ಮಲ್ಲಿಕಾರ್ಜುನ)