Chikkaballapur : ನವೆಂಬರ್ 11 ರಂದು ಪ್ರಧಾನಿ ಮೋದಿಯವರಿಂದ (Prime Minister Modi) ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport Bengaluru) ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೇಗೌಡ (KempeGowda I) (statue of prosperity) ರ 108 ಅಡಿಯ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಜಿಲ್ಲೆಯಾದ್ಯಂತ ‘ಪವಿತ್ರ ಮಣ್ಣು (ಮೃತ್ತಿಕೆ) ಮತ್ತು ನೀರು ಸಂಗ್ರಹಿಸಿರುವ ಕೆಂಪೇಗೌಡ ರಥಕ್ಕೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮಂಗಳವಾರ ಜಿಲ್ಲಾಡಳಿತ ಭವನದ ಮುಂಭಾಗ ಬಿಳ್ಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ “ಅಕ್ಟೋಬರ್ 25 ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆಗೊಂಡಿದ್ದ ನಾಡಪ್ರಭು ಕೆಂಪೇಗೌಡರ ರಥ ಜಿಲ್ಲೆಯ 157 ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಜಿಲ್ಲೆಯ ಪ್ರಸಿದ್ಧ ಪಾರಂಪರಿಕ ಸ್ಥಳಗಳಾದ ವಿದುರಾಶ್ವತ್ಥ, ಕೈವಾರ, ರಂಗಸ್ಥಳ, ನಂದಿ, ಆಲಂಬಗಿರಿ, ಮುದ್ದೇನಹಳ್ಳಿ ಇನ್ನೂ ಮುಂತಾದ ಪುಣ್ಯ ಕ್ಷೇತ್ರಗಳಲ್ಲಿ ಮಣ್ಣು ಮತ್ತು ನೀರನ್ನು ಸಂಗ್ರಹಿಸಲಾಗಿದೆ. ಈ ಮೃತ್ತಿಕೆ ಮತ್ತು ನೀರನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೇಗೌಡರ 108 ಅಡಿಯ ಕಂಚಿನ ಪ್ರತಿಮೆಯ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಉದ್ಯಾನಕ್ಕೆ (ಥೀಮ್ ಪಾರ್ಕ್) ಉಪಯೋಗಿಸಲಾಗುತ್ತದೆ” ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪಿ.ಶಿವಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಜಿ.ಸಂತೋಷ್ ಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಿವಕುಮಾರ್ ಹಾಗೂ ಜಿಲ್ಲಾ, ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.