Chikkaballapur : ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ವ್ಯವಸ್ಥೆ , ಹೊಸ ಸ್ಟೋವ್, ಹೊಸ ಮೊಬೈಲ್ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಅಂಗನವಾಡಿ ನೌಕರರರು (Anganawadi Workers) ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು (Protest) .
ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಜಿ.ಎಂ.ಲಕ್ಷ್ಮಿದೇವಮ್ಮ ಮಾತನಾಡಿ “ಆಹಾರ, ಆರೋಗ್ಯ ಮತ್ತು ಶಿಕ್ಷಣ ಉಳಿಸಿ ದೇಶವನ್ನು ಅಭಿವೃದ್ಧಿಪಡಿಸಬೇಕು. ಶ್ರಮಿಕರ ಬದುಕನ್ನು ಸಮಾನ ವೇತನ ನಿಗದಿಪಡಿಸಿ ಉಳಿಸಬೇಕು ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಅನುದಾನ ಹೆಚ್ಚಿಸಬೇಕು ಎಂದು ಆಗ್ರಹಿಸಿ ಸಂಸದರ ಕಚೇರಿ ಚಲೋ ಹಮ್ಮಿಕೊಳ್ಳಲಾಗಿದೆ. ಅಂಗನವಾಡಿಗಳಲ್ಲಿ ಸ್ಟೌಗಳು ಹಾಳಾಗಿದ್ದು ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಹೊಸ ಸ್ಟೌ ಕೊಡಬೇಕು. ಮೂರು ತಿಂಗಳಿಗೆ ಒಮ್ಮೆ ನೌಕರರ ಕುಂದುಕೊರತೆ ಸಭೆ ಮಾಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಬೇಕು” ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿದ್ದಗಂಗಪ್ಪ, ಪದಾಧಿಕಾರಿಗಳಾದ ರತ್ನಮ್ಮ, ಪಿ.ಎಂ.ಮುನಿರತ್ನಮ್ಮ, ಎಸ್.ಸಿ.ಮಂಜುಳಾ, ಬಿ.ಎನ್.ಮುನಿಕೃಷ್ಣಪ್ಪ ಹಾಗೂ ಅಂಗನವಾಡಿ ಸಿಬ್ಬಂದಿ ಪಾಲ್ಗೊಂಡಿದ್ದರು.