Chikkaballapur : ಅಸ್ಸಾಂನಲ್ಲಿ ಭಾರತ್ ಜೋಡೊ ನ್ಯಾಯ ಯಾತ್ರೆ (Bharat Jodo Nyay Yatra) ಸಾಗುತ್ತಿದ್ದಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ BJP ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ (Congress) ಜಿಲ್ಲಾ ಸಮಿತಿಯಿಂದ ಚಿಕ್ಕಬಳ್ಳಾಪುರ ನಗರದಲ್ಲಿ ಮಂಗಳವಾರ ಪ್ರತಿಭಟನೆ (Protest) ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ “ಅಸ್ಸಾಂನಲ್ಲಿ ಯಾತ್ರೆ ಸಾಗುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದು ಖಂಡನೀಯ. . ಅಸ್ಸಾಂ ಸರ್ಕಾರವು ಹಲ್ಲೆಗೆ ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ರಾಹುಲ್ ಗಾಂಧಿರವರು ಮಾಡುತ್ತಿರುವ ಯಾತ್ರೆಯಿಂದ ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಅಸ್ತಿತ್ವಕ್ಕೆ ಪೆಟ್ಟು ಬೀಳುತ್ತದೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಅಡೆ ತಡೆ ಮಾಡುತ್ತಿದ್ದಾರೆ. ರಾಮನನ್ನು ರಾಜಕೀಯಕ್ಕೆ ಬಿಜೆಪಿ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್‌ನವರು ಗಾಂಧಿ ಮತ್ತು ನಿಜ ರಾಮ ಮಾರ್ಗದಲ್ಲಿ ನಡೆಯುವವರು. ಬಿಜೆಪಿಯವರು ಗೋಡ್ಸೆ ಮಾರ್ಗದಲ್ಲಿ ನಡೆಯುವವರು. ದೇಶ ಕಟ್ಟಬೇಕು ಎನ್ನುವುದು ಕಾಂಗ್ರೆಸ್ ನೀತಿ” ಎಂದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಎಸ್.ಎಂ. ಮುನಿಯಪ್ಪ, ಶಿವಾನಂದ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಂದಿ ಆಂಜನಪ್ಪ, ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ನಗರಸಭೆ ಸದಸ್ಯ ರಫೀಕ್, ಮುಖಂಡರಾದ ಪುರದಗಡ್ಡೆ ಕೃಷ್ಣಪ್ಪ, ಮಮತಾ ಮೂರ್ತಿ, ‘ಲಾಯರ್’ ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.