Chikkaballapur : ಅಯೋಧ್ಯೆ (Ayodhya) ಯಲ್ಲಿ ರಾಮ ಮೂರ್ತಿಯ ಪ್ರಾಣ ಪ್ರತಿಷ್ಠೆ ಅಂಗವಾಗಿ (Rama Pran Pratista) ಸೋಮವಾರ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ರಾಮ, ಆಂಜನೇಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ವಿಜೃಂಭಣೆಯಿಂದ ನಡೆಯಿತು. ಎಲ್ಲಾ ನಗರ ಪ್ರದೇಶ ಮತ್ತು ಹಳ್ಳಿಗಳಲ್ಲಿ ಜನರು ಬೆಳಿಗ್ಗೆಯಿಂದ ಸಂಜೆಯವರೆಗೂ ಅನ್ನ ಸಂತರ್ಪಣೆ, ಪಾನಕ, ಕೋಸಂಬರಿ, ಪ್ರಸಾದವನ್ನು ವಿತರಿಸಿದರು ಮತ್ತು ಮನೆಗಳಲ್ಲಿ ರಾತ್ರಿ ದೀಪಗಳನ್ನು ಬೆಳಗಿಸಿದರು.
ನಗರದಲ್ಲಿ ಎಚ್.ಎಸ್.ಗಾರ್ಡನ್‌ನ ಆಂಜನೇಯ ದೇವಾಲಯ, ಗಂಗಮ್ಮನ ಗುಡಿ ಬೀದಿಯಲ್ಲಿರುವ ಪೇಟೆ ಆಂಜನೇಯ ದೇವಾಲಯ, ಹಳೆ ಪೊಲೀಸ್ ಠಾಣೆ ರಸ್ತೆಯ ಜೀವಾಂಜನೇಯ, ಇಂದಿರಾ ನಗರದ ಅಭಯ ಆಂಜನೇಯ, ಹಳೆ ಜಿಲ್ಲಾಸ್ಪತ್ರೆಯ ಪಂಚಮುಖಿ ಆಂಜನೇಯ, ಬಜಾರ್ ರಸ್ತೆಯ ಕೋದಂಡ ರಾಮಸ್ವಾಮಿ ದೇವಾಲಯ, ಜಾಲಾರಿ ಗಂಗಮ್ಮ ದೇವಾಲಯ, ಕಂದವಾರ ಬಾಗಿಲು ಲಕ್ಷ್ಮಿ ವೆಂಕಟೇಶ್ವರ, ಅಗಲಗುರ್ಕಿಯ ರಾಮಮಂದಿರ, ಸೋಲಾಲಪ್ಪದಿನ್ನೆಯ ವೀರಾಂಜನೇಯ ದೇವಾಲಯ–ಹೀಗೆ ಎಲ್ಲ ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕಗಳು ನಡೆದವು.
ಗುಡಿಬಂಡೆ :
![Ayodhya Rama Pran Pratista Celebration Gudibande](https://chikkaballapur.com/wp-content/uploads/2024/01/23JanGUD-1024x683.jpg)
ಗುಡಿಬಂಡೆ ತಾಲ್ಲೂಕಿನ ಸುರಸದ್ಮಗಿರಿ ಬೆಟ್ಟದಲ್ಲಿನ ರಾಮಲಿಂಗೇಶ್ವೇರ, ಕೋಟೆರಾಮ ಮಂದಿರ, ಆದಿನಾರಾಯಣ, ಮಾರುತಿ ವೃತ್ತದ ಬಾಲಾಂಜನೇಯ, ತಾಲ್ಲೂಕಿನ ಬೊಮ್ಮನಹಳ್ಳಿ ಕೋದಂಡರಾಮ ದೇವಾಲಯ, ಬೀಚಗಾನಹಳ್ಳಿ ಕೋದಂಡರಾಮ, ಉಲ್ಲೋಡು ಅಭಯಾಂಜನೇಯ, ಹಂಪಸಂದ್ರ ಆಂಜನೇಯ ದೇವಾಲಯ, ಸೋಮೇನಹಳ್ಳಿ ರಾಮ ದೇವಾಲಯ ಸೇರಿದಂತೆ ತಾಲ್ಲೂಕಿನಾದ್ಯಂತ ವಿಶೇಷ ಪೂಜೆ, ಅಭಿಷೇಕ, ಮಹಾ ಮಂಗಳಾರತಿ ನೆರವೇರಿತು.
ಚಿಂತಾಮಣಿ :
ಚಿಂತಾಮಣಿ ನಗರದ ವಿವಿಧ ಬಡಾವಣೆ ಹಾಗೂ ಮುಖ್ಯ ವೃತ್ತಗಳಲ್ಲಿ ರಾಮನ ಕಟೌಟ್, ಬ್ಯಾನರ್, ಧ್ವಜಗಳು ರಾರಾಜಿಸುತ್ತಿದ್ದವು. ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಬಾಗೇಪಲ್ಲಿ :
ಬಾಗೇಪಲ್ಲಿ ನಗರದ ಸಂತೇಮೈದಾನದ ರಸ್ತೆಯಲ್ಲಿ ಕೋದಂಡರಾಮ ದೇವಾಲಯದಲ್ಲಿ ರಾಮಕೋಟಿ ನಾಮ ಜಪಯಜ್ಞ ಸಪ್ತಾಹ ನಡೆಯಿತು. ಸೋಮವಾರ ಬೆಳಿಗ್ಗೆ ಗಣಪತಿ ಪೂಜೆ, ಪೂಣ್ಯಾಹ, ಮಾತೃಕಾ ಪೂಜೆ, ಪಂಚಗವ್ಯ ಪ್ರಾಶನ, ರಕ್ಷಾಬಂಧನ, ಕಳಶಸ್ಥಾಪನೆ, ರಾಮ ತಾರಕ ಹೋಮ, ಪೂರ್ಣಾಹುತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು.
ಶಿಡ್ಲಘಟ್ಟ :
ಶಿಡ್ಲಘಟ್ಟ ನಗರದ ಕೋಟೆ ಶ್ರೀರಾಮ ದೇವಾಲಯ, ತಾಲ್ಲೂಕಿನ ಕದಿರಿನಾಯಕನಹಳ್ಳಿ ಗ್ರಾಮದ ಆಂಜನೇಯ ದೇವಾಲಯ, ಕೊತ್ತನೂರು ಗ್ರಾಮದ ಚನ್ನಕೇಶವ ದೇವಾಲಯ ಸೇರಿದಂತೇ ಇನ್ನು ಹಲವು ದೇವಾಲಯಗಳಲ್ಲಿ ಪೂಜೆ ನೆರೆವೇರಿಸಲಾಯಿತು. ತಾಲ್ಲೂಕಿನ ಸಾದಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಲವರಾತಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಸಾಯಿಬಾಬಾ ಮಂದಿರದ ಉದ್ಘಾಟನೆ, ಸಾಯಿಬಾಬಾ ವಿಗ್ರಹ ಪ್ರತಿಷ್ಠಾಪನೆ ನೆರವೇರಿತು.
ಗೌರಿಬಿದನೂರು:
ಗೌರಿಬಿದನೂರು ನಗರದಲ್ಲಿ ರಾಮ್ ರಹೀಮ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ರಾಮನ ಪೂಜಾ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಮರು ಸಾಮೂಹಿಕವಾಗಿ ಹೆಸರು ಬೇಳೆ, ಪಾನಕ ವಿತರಿಸಿದರು.
ಚೇಳೂರು :
ಚೇಳೂರು ತಾಲ್ಲೂಕಿನ ರಾಮನ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿದವು. ಮಹಾತ್ಮ ಗಾಂಧಿ ವೃತ್ತದಲ್ಲಿ ಮತ್ತು ಎಲ್ಲ ರಸ್ತೆಗಳಲ್ಲಿ ರಾಮನ ಫ್ಲೆಕ್ಸ್ ರಾರಾಜಿಸುತ್ತಿದ್ದವು.