Bagepalli : ಪ್ರಜಾ ಸಂಘರ್ಷ ಸಮಿತಿ (ಪಿಎಸ್‍ಎಸ್) ಹಾಗೂ ರಾಜ್ಯ ರೈತ ಸಂಘ, ಹಸಿರುಸೇನೆಯ ಕಾರ್ಯಕರ್ತರು ಉತ್ತರಪ್ರದೇಶದ ಲಖಿಂಪುರ-ಖೇರಿ ಪ್ರದೇಶದಲ್ಲಿ ರೈತರ ಮೇಲೆ ವಾಹನ ನುಗ್ಗಿಸಿ ನಡೆದ ಹತ್ಯಾಕಾಂಡವನ್ನು ವಿರೋಧಿಸಿ ಸೋಮವಾರ ಪ್ರತಿಭಟನೆ ನಡೆಸಿದರು.
ಬಾಗೇಪಲ್ಲಿ ಪಟ್ಟಣದ ಸುಂದರಯ್ಯ ಭವನದಿಂದ ಹೊರಟ ಕಾರ್ಯಕರ್ತರು ಮುಖ್ಯರಸ್ತೆಯಲ್ಲಿ ಸಂಚರಿಸಿದ ಪ್ರತಿಭಟನಾಕಾರರು ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು.
ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, ದೇಶದಲ್ಲಿ ಕೊಲೆಗಡುಕ ಹಾಗೂ ಸರ್ವಾಧಿಕಾರ ಧೋರಣೆಗಳ ಸರ್ಕಾರ ಆಡಳಿತದಲ್ಲಿ ಇದೆ. ಉತ್ತರಪ್ರದೇಶದ ಲಖಿಂಪುರ್-ಖೇರಿ ಪ್ರದೇಶದಲ್ಲಿ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಹೋರಾಟದ ದಿಕ್ಕನ್ನು ಬದಲಿಸಲು ರೈತರ ಮೇಲೆ ಜೀಪು ಹತ್ತಿಸಿ ಕೊಲೆ ಮಾಡುತ್ತಿದ್ದಾರೆ. ಜನರನ್ನು ರಕ್ಷಣೆ ಮಾಡಬೇಕಾದ ಸರ್ಕಾರ, ಹತ್ಯೆ ಮಾಡಲು ಹೊರಟಿರುವುದು ಖಂಡನೀಯ ಎಂದರು.
ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ಫ್ಯಾಸಿಸ್ಟ್ ಧೋರಣೆ ಅನುಸರಿಸುತ್ತಿವೆ. ಕೃಷಿ ಕೂಲಿಕಾರ್ಮಿಕರ, ಜನಸಾಮಾನ್ಯರ ಬದುಕಿನ ಜತೆ ಚೆಲ್ಲಾಟ ಆಡುತ್ತಿದೆ. ಭೂಸ್ವಾಧೀನ, ಭೂಸುಧಾರಣೆ, ವಿದ್ಯುತ್, ಎಪಿಎಂಸಿಯಂತಹ ಕಾಯ್ದೆಗಳಿಗೆ ತಿದ್ದುಪಡಿ ಮಾಡಲು ಹೊರಟಿದೆ. ಅಗತ್ಯ ವಸ್ತುಗಳಾದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ತರಕಾರಿ ಬೆಳೆಗಳು ಏರಿಕೆ ಆಗಿರುವುದರಿಂದ, ಜನಸಾಮಾನ್ಯರಿಗೆ ಹೊರೆ ಆಗುತ್ತಿದೆ. ಈ ರೀತಿಯ ಭಯೋತ್ಪಾದಕ ಸರ್ಕಾರಗಳನ್ನು ಕಿತ್ತೆಸೆಯಲು ಕೃಷಿ ಕೂಲಿಕಾರ್ಮಿಕರ, ದಲಿತ, ಪ್ರಗತಿಪರ ಸಂಘಟನೆಗಳು, ರಾಜಕೀಯ ಪಕ್ಷಗಳು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.
ಪ್ರಜಾ ಸಂಘರ್ಷ ಸಮಿತಿ ಮುಖಂಡ ಚನ್ನರಾಯಪ್ಪ, ಜಿ.ಎಂ.ರಾಮಕೃಷ್ಣಪ್ಪ, ಜುಬೇರ್ ಅಹಮದ್, ಎಲ್.ವೆಂಕಟೇಶ್, ಎಚ್.ಎನ್.ಚಂದ್ರಶೇಖ ರೆಡ್ಡಿ, ಆರ್.ಚಂದ್ರಶೇಖರ ರೆಡ್ಡಿ, ಟಿ.ಎಲ್.ವೆಂಕಟೇಶ್, ಭಾಷಾಸಾಬ್, ಹಸಿರು ಸೇನೆ ರಾಜ್ಯ ಮಹಿಳಾ ಸಂಚಾಲಕಿ ಸಿ.ಉಮಾ, ತಾಲ್ಲೂಕು ಕಾರ್ಯದರ್ಶಿ ಟಿ.ರಘುನಾಥರೆಡ್ಡಿ, ವೆಂಕಟರೆಡ್ಡಿ, ನರಸಿಂಹಾರೆಡ್ಡಿ, ಎ.ವೆಂಕಟರಾಮಯ್ಯ, ಹನುಮಪ್ಪ, ಶ್ರೀನಿವಾಸ್ ಪ್ರತಿಭಟಣೆಯಲ್ಲಿ ಉಪಸ್ಥಿತರಿದ್ದರು.