Gadidam, Bagepalli : ತಾಲ್ಲೂಕಿನ ಐತಿಹಾಸಿಕ ದೇವರಗುಡಿಪಲ್ಲಿ (ಗಡಿದಂ)ನ ಶ್ರೀ ಲಕ್ಷ್ಮಿವೆಂಕಟರಮಣಸ್ವಾಮಿ ರಥೋತ್ಸವವು ‘ಎರಡನೇ ತಿರುಮಲ’ ಎಂಬ ಹೆಗ್ಗಳಿಕೆಗೆ ತಕ್ಕಂತೆ ಸೋಮವಾರ ಸಾವಿರಾರು ಭಕ್ತರ ಸಾನ್ನಿಧ್ಯದಲ್ಲಿ ಭಕ್ತಿಭಾವಪೂರ್ಣವಾಗಿ ಮತ್ತು ವಿಜೃಂಭಣೆಯಿಂದ ನಡೆಯಿತು.
ಬೆಳಗಿನ ಜಾವ 4 ಗಂಟೆಗೆ ಭೂದೇವಿ ಮತ್ತು ನೀಳಾದೇವಿಯ ಸಮೇತ ಶ್ರೀ ಲಕ್ಷ್ಮಿವೆಂಕಟರಮಣಸ್ವಾಮಿಗೆ ಪ್ರಧಾನ ಅರ್ಚಕ ಕೆ. ಪ್ರಕಾಶ್ ರಾವ್ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ನಂತರ ನಾದಸ್ವರ, ಡೋಲು ಧ್ವನಿಗಳ ಮಧ್ಯೆ ಉತ್ಸವ ಮೂರ್ತಿಯನ್ನು ರಥದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು.
ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮತ್ತು ತಹಶೀಲ್ದಾರ್ ಮನೀಷಾ ಎನ್. ರಥಕ್ಕೆ ಪತ್ರಿ ಪೂಜೆ ಸಲ್ಲಿಸಿ ಉದ್ಘಾಟನೆ ಮಾಡಿದರು. ರಥದೊಳಗೆ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೀಪಾರಾಧನೆ ನೆರವೇರುತ್ತಿದ್ದಂತೆಯೇ “ಗೋವಿಂದಾ ಗೋವಿಂದಾ” ಎಂಬ ಘೋಷಣೆಗಳಿಂದ ಆವರಣವು ಭಕ್ತಿಯಿಂದ ಸ್ಪಂದಿಸಿತು. ಭಕ್ತರು ಬಾಳೆಹಣ್ಣಿಗೆ ದವನ ಚುಚ್ಚಿ ಸಮರ್ಪಣೆ ಸಲ್ಲಿಸಿ ರಥ ಎಳೆದರು.
ಈ ಭಕ್ತಿಸಾನ್ದರ್ಭದಲ್ಲಿ ಶಾಸಕ ಸುಬ್ಬಾರೆಡ್ಡಿಯವರಿಂದ ಅನ್ನದಾನ ಕಾರ್ಯಕ್ರಮ ಜರಗಿತು. ನೆರೆಯ ಗ್ರಾಮಸ್ಥರು ಎತ್ತಿನಬಂಡಿ, ಟ್ರ್ಯಾಕ್ಟರ್‌ಗಳ ಮೂಲಕ ಪಾನಕ, ಮಜ್ಜಿಗೆ, ಕೊಸಂಬರಿ ಹಂಚಿದರು. ಆರಾಮಕ್ಕಾಗಿ ಅರವಂಟಿಕೆ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮ ಪಂಚಾಯಿತಿ ಕಚೇರಿ ಎದುರು ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ಉಚಿತ ಆರೋಗ್ಯ ತಪಾಸಣೆ ನಡೆಸಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನಾದ್ಯಂತದ ಹಳ್ಳಿಗಳಿಂದ, ಆಂಧ್ರಪ್ರದೇಶ, ತೆಲಂಗಾಣ, ಬೆಂಗಳೂರು ಮೊದಲಾದ ಊರುಗಳಿಂದ ಸಾವಿರಾರು ಭಕ್ತರು ದೇವರ ದರ್ಶನಕ್ಕಾಗಿ ಆಗಮಿಸಿದ್ದರು. ಶ್ರದ್ಧಾಭಕ್ತಿಯಿಂದ ಸರತಿಯಲ್ಲಿ ನಿಂತು ದರ್ಶನ ಪಡೆದ ಭಕ್ತರು, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸಿದರು. ದೇವಾಲಯದ ಮುಂದಿರುವ 108 ಅಡಿಗಳ ಗೋಪುರ ಹಾಗೂ ಆಂಜನೇಯ ವಿಗ್ರಹಕ್ಕೂ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಪವಿತ್ರ ಕಾರ್ಯಕ್ರಮದ ಯಶಸ್ಸಿಗೆ ಇಒ ಜಿ.ವಿ. ರಮೇಶ್, ಸಿಐ ಪ್ರಶಾಂತ್ ವರ್ಣಿರು, ರಾಜಸ್ವ ನಿರೀಕ್ಷಕ ಎಸ್.ಎ. ಪ್ರಶಾಂತ್, ಗ್ರಾಮೀಣ ಅಧಿಕಾರಿಗಳು ಹಾಗೂ ದೇವಾಲಯದ ಸಿಬ್ಬಂದಿ ಶ್ರಮಿಸಿದರು. ಸ್ಥಳೀಯ ಮುಖಂಡರು, ದೇವಾಲಯದ ಪೇಷ್ಕಾರ್, ಬಿಲ್ ಕೆಲೆಕ್ಟರ್, ದರಖಾಸ್ತು ಸಮಿತಿ ಸದಸ್ಯರು ಸೇರಿ ಹಲವರು ಸಕ್ರಿಯವಾಗಿ ಪಾಲ್ಗೊಂಡರು.
ರಥೋತ್ಸವದ ಅಂಗವಾಗಿ ನಡೆದ ದನಗಳ ಜಾತ್ರೆಗೂ ಭಾರಿ ಸ್ಪಂದನೆ ದೊರೆಯಿತು. ನೇರೆಗಿನ ಗ್ರಾಮಗಳಿಂದ ಹಾಗೂ ಆಂಧ್ರಪ್ರದೇಶದಿಂದ ಬಂದ ರೈತರು ತಮ್ಮ ದನ, ಎತ್ತುಗಳನ್ನು ಮಾರಾಟ ಮಾಡಿದರು. ಕೆಲವರು ಉತ್ತಮ ದನಗಳನ್ನು ಖರೀದಿಸಿ ಹರ್ಷ ವ್ಯಕ್ತಪಡಿಸಿದರು.