Chintamani : ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷ ರಘುನಾಥ್ ಅವರು, “ರಾಜ್ಯದಾದ್ಯಂತ ಬ್ರಾಹ್ಮಣ ಸಮುದಾಯದ ಶೈಕ್ಷಣಿಕ ಹಾಗೂ ಆರ್ಥಿಕ ಸಬಲತೆಗೆ ₹100 ಕೋಟಿ ಠೇವಣಿಯನ್ನು ಸಂಗ್ರಹಿಸುವ ಮಹತ್ತರ ಗುರಿಯನ್ನು ಹೊಂದಿದ್ದೇವೆ” ಎಂದು ಹೇಳಿದ್ದಾರೆ.
ತಾಲ್ಲೂಕಿನ ಕೋನಕುಂಟ್ಲು ಗ್ರಾಮದಲ್ಲಿ ಭಾನುವಾರ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಾ, “ಈತನಕ ಒಂದೇ ತಿಂಗಳಲ್ಲಿ ₹35 ಲಕ್ಷ ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ದೇಣಿಗೆ ಸ್ವೀಕರಿಸಿ, ಗುರಿಯಾದ ₹100 ಕೋಟಿ ಸಂಗ್ರಹಕ್ಕೆ ಶ್ರಮಿಸುತ್ತೇವೆ” ಎಂದರು.
ಠೇವಣಿಯಿಂದ ಬಡ ವಿದ್ಯಾರ್ಥಿಗಳಿಗೆ ಸಹಾಯ
“ಪ್ರಸ್ತುತ ಬ್ರಾಹ್ಮಣ ಮಹಾಸಭಾದಲ್ಲಿ ₹6.5 ಕೋಟಿ ಠೇವಣಿಯಿದ್ದು, ಅದರ ಬಡ್ಡಿಯಿಂದ ಬಡ ಬ್ರಾಹ್ಮಣ ಕುಟುಂಬಗಳು ಮತ್ತು ವಿದ್ಯಾರ್ಥಿಗಳಿಗೆ ಸಾಕಷ್ಟು ನೆರವು ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೆಚ್ಚಿನ ಸಂಪತ್ತನ್ನು ಸಂಗ್ರಹಿಸಿ, ಸಮಾಜದ ಬೆಳೆವಣಿಗೆಯ ಕಡೆಗೆ ನಿರ್ಧಾರಿತ ಯೋಜನೆಗಳನ್ನು ರೂಪಿಸುತ್ತಿದ್ದೇವೆ” ಎಂದರು.
ಇದಕ್ಕಾಗಿ ಎರಡು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ನೂತನ ವಿದ್ಯಾಸಂಸ್ಥೆಗಳ ಸ್ಥಾಪನೆ, ವಿದ್ಯಾರ್ಥಿಗಳಿಗೆ ಶ್ರೇಷ್ಠ ಶಿಕ್ಷಣ ಸೌಲಭ್ಯ ಕಲ್ಪನೆ ಮತ್ತು ಹಲವು ಸಮುದಾಯಮುಖಿ ಯೋಜನೆಗಳನ್ನು ಜಾರಿಗೆ ತರಲು ಮಹಾಸಭಾ ಉದ್ದೇಶಿಸಿದೆ.
ಜಾತಿ ಗಣತಿ ಮತ್ತು ಪ್ರತಿನಿಧಿತ್ವದ ಕೊರತೆ
ರಾಜ್ಯ ಸರ್ಕಾರ ನಡೆಸಿದ ಜಾತಿ ಗಣತಿಯಲ್ಲಿ ಬ್ರಾಹ್ಮಣ ಸಮುದಾಯದ ಸಂಖ್ಯೆಯನ್ನು ಸಮರ್ಪಕವಾಗಿ ದಾಖಲಿಸಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ ಅವರು, “ಸಮುದಾಯವು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಬಲಿಷ್ಠವಾದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಮಹಾಸಭಾ ಶಕ್ತೀಕರಣ – ಗ್ರಂಥಾಲಯ ಯೋಜನೆ
“ಮಹಾಸಭಾದ ಬೈಲದಲ್ಲಿ ಕೆಲವು ನ್ಯೂನತೆಗಳಿವೆ. ಅವುಗಳನ್ನು ಸರಿಪಡಿಸಲು ಉಪಾಧ್ಯಕ್ಷ ಲಕ್ಷ್ಮೀಕಾಂತ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಭವಿಷ್ಯದಲ್ಲಿ ಮಹಾಸಭಾದ ಅಡಿಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವ ಗ್ರಂಥಾಲಯವನ್ನು ಸ್ಥಾಪಿಸುವ ಯೋಜನೆಯೂ ಇದೆ” ಎಂದು ಅವರು ಹೇಳಿದರು.
ಜಿಲ್ಲಾ ಪ್ರತಿನಿಧಿ ಪ್ರಕಾಶ್, ವಕೀಲ ಬಿ.ಆರ್. ಶ್ರೀನಾಥ್, ಯೋಗೀಶ್ವರ ಯಾಜ್ಞವಲ್ಕ್ಯ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು. ಬ್ರಾಹ್ಮಣ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗಭೂಷಣ್, ತಾಲ್ಲೂಕು ಅಧ್ಯಕ್ಷ ಗೋಪಾಲಕೃಷ್ಣ ಹಾಗೂ ಪದಾಧಿಕಾರಿಗಳಾದ ಪುರುಷೋತ್ತಮ್, ನರಸಿಂಹಪ್ರಸಾದ್, ರಾಂಜಿಗುರು, ನರಸಿಂಹಮೂರ್ತಿ, ಮುರಳಿಕೃಷ್ಣ, ಟಿ.ಎಲ್. ಅನಂತ, ಆನಂದ್, ಟಿ.ಎಸ್. ನಾಗರಾಜ್, ಮಂಜುಳ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.