Bagepalli : ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗಳ ಒಕ್ಕೂಟದ ಬಾಗೇಪಲ್ಲಿ ತಾಲ್ಲೂಕು ಸಮಿತಿಯ ಮುಖಂಡರು ಪುರಸಭೆ ವ್ಯಾಪ್ತಿಯ ಮುಖ್ಯರಸ್ತೆ ಸೇರಿ ವಿವಿಧ ವಾರ್ಡುಗಳ ರಸ್ತೆಗಳ ಹೆಸರನ್ನು ಕನ್ನಡೀಕರಣಗೊಳಿಸಬೇಕೆಂದು ಒತ್ತಾಯಿಸಿ ಶುಕ್ರವಾರ ಪುರಸಭೆ ಮುಖ್ಯಾಧಿಕಾರಿ ಎ.ಮಧುಕರ್ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಸಮಿತಿಯ ಅಧ್ಯಕ್ಷ ಬಿ.ಎ. ಬಾಬಾಜಾನ್ ಮಾತನಾಡಿ, ಬಾಗೇಪಲ್ಲಿ ತಾಲ್ಲೂಕು ಆಂಧ್ರಪ್ರದೇಶದ ಪಕ್ಕದಲ್ಲಿ ಇದ್ದು, ಅತ್ಯಂತ ಹಿಂದುಳಿದ ಹಾಗೂ ಗಡಿ ಪ್ರದೇಶವಾಗಿದೆ. ಇಲ್ಲಿ ಆಡುಭಾಷೆ ತೆಲುಗು ಆದರೂ, ವ್ಯವಹಾರಿಕ ಭಾಷೆ ಕನ್ನಡವಾಗಿದೆ. ಪಟ್ಟಣದ ಕೆಲವು ರಸ್ತೆಗಳನ್ನು ತೆಲುಗಿನಿಂದ ಕರೆಯಲಾಗುತ್ತಿದ್ದು ಅವುಗಳನ್ನು ಪ್ರಮುಖ ಕವಿಗಳ, ಹೋರಾಟಗಾರರ ಹೆಸರಿನೊಂದಿಗೆ ಹೆಸರಿಸಬೇಕು. ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಗೆ ಡಿವಿಜಿ ರಸ್ತೆ ಹಾಗೂ ಗೂಳೂರು ರಸ್ತೆಯನ್ನು ಡಾ। ಜಚನಿ ರಸ್ತೆ ಎಂದು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್, ಮುಖಂಡರಾದ ಕರಾಟೆ ರಿಯಾಜ್, ನಾಗರಾಜ್, ಷೇಕ್ ಹಿದಾಯುತುಲ್ಲಾ, ಆರ್ಶೀವಾದಮ್ಮ, ಸುಶೀಲಮ್ಮ, ಸಂತೋಷಿ, ವಿಜಯಲಕ್ಷ್ಮೀ, ಗೀತಾ, ರಾಣಿ, ಸುಧಾಕರ್, ಡೇವಿಡ್, ಶಾಂತಿ, ವೆಂಕಟಮ್ಮ ಉಪಸ್ಥಿತರಿದ್ದರು.