Abludu, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿಯ ಮಲ್ಲಹಳ್ಳಿ ಗ್ರಾಮದಲ್ಲಿ ರೇಷ್ಮೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಯಶಸ್ವಿ ದ್ವಿತಳಿ ರೇಷ್ಮೆ (Bivoltine Silk Cocoon Farming) ಬೆಳೆಗಾರ ರೈತರಿಂದಲೆ ಇತರ ರೈತರಿಗೆ ಗ್ರಾಮ ಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಆಂಜನೇಯಗೌಡ ಅವರು ಮಾತನಾಡಿದರು.
ಮುಂದೊಂದು ದಿನ ದ್ವಿತಳಿ ರೇಷ್ಮೆಗೂಡು ಹಾಗೂ ಅದರ ನೂಲಿಗೆ ಮಾತ್ರವೇ ಬೇಡಿಕೆ ಮತ್ತು ಬೆಲೆ ಸಿಗಲಿದೆ. ಎಲ್ಲ ರೈತರೂ ದ್ವಿತಳಿ ರೇಷ್ಮೆಗೂಡು ಬೆಳೆಯಲು ಅನಿವಾರ್ಯವಾಗಿಯಾದರೂ ಮುಂದಾಗಲೇಬೇಕೆಂದು ತಿಳಿಸಿದರು.
ದ್ವಿತಳಿ ರೇಷ್ಮೆ ಬೆಳೆಯುವುದು ಅನಿವಾರ್ಯ, ಅದಕ್ಕಾಗಿ ಸರ್ಕಾರ ರೇಷ್ಮೆ ಇಲಾಖೆ ಮೂಲಕ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಅವುಗಳ ಪೈಕಿ ದ್ವಿತಳಿ ರೇಷ್ಮೆ ಕೃಷಿಯಲ್ಲಿ ಪ್ರಗತಿ ಸಾಧಿಸಿದ ರೈತರಿಂದಲೆ ಇತರೆ ರೈತರಿಗೆ ದ್ವಿತಳಿ ರೇಷ್ಮೆಬೆಳೆ ಕುರಿತು ತರಬೇತಿ ನೀಡುವ ಕಾರ್ಯಕ್ರಮ ಒಂದಾಗಿದೆ. ಇದರಿಂದ ಹಲವಾರು ರೈತರು ದ್ವಿತಳಿ ರೇಷ್ಮೆ ಬೆಳೆಯಲು ಮುಂದಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ದ್ವಿತಳಿ ರೇಷ್ಮೆ ಬೆಳೆಯುವುದರಲ್ಲಿ ಯಶಸ್ವಿಯಾಗಿರುವ ಮಲ್ಲಹಳ್ಳಿಯ ರೈತ ಶಿವಕುಮಾರ್ ಮಾತನಾಡಿ, ದ್ವಿತಳಿ ರೇಷ್ಮೆ ಹುಳು ಸಾಕಾಣೆ ಮಾಡಲು ಕೈಗೊಂಡಿರುವ ಕ್ರಮ, ಹುಳು ಮನೆಗೆ ಔಷದೋಪಚಾರ, ಹಿಪ್ಪುನೇರಳೆ ಸೊಪ್ಪು ತೋಟ ನಿರ್ವಹಣೆ ಇನ್ನಿತರೆ ಹಲವು ವಿಚಾರಗಳ ಬಗ್ಗೆ ತನ್ನ ಅನುಭವವವನ್ನು ಹಂಚಿಕೊಂಡರು.
ಇತರೆ ರೈತರಿಗೂ ದ್ವಿತಳಿ ಬೆಳೆಯುವುದರಿಂದ ಆಗುವ ಉಪಯೋಗ, ಲಾಭಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ದ್ವಿತಳಿ ರೇಷ್ಮೆ ಹುಳು ಸಾಕಣೆ ಮಾಡಲು ಪ್ರೇರೇಪಿಸಿದರು.
ವಿಜ್ಞಾನಿ ಜಿ.ವಿ.ನರೇಂದ್ರಕುಮಾರ್, ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ಪ್ರಗತಿಪರ ರೈತ ಬೋದಗೂರು ನಾಗೇಶ್, ಅಬ್ಲೂಡು ದೇವರಾಜ್, ತಿಪ್ಪೇನಹಳ್ಳಿ ವಿಜಯ್ ಕುಮಾರ್, ಬೋದಗೂರು ವೆಂಕಟಸ್ವಾಮಿರೆಡ್ಡಿ, ಹಿತ್ತಲಹಳ್ಳಿ ಗೋಪಾಲಗೌಡ, ಸೇರಿದಂತೆ ರೇಷ್ಮೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.